ಪಶ್ಚಿಮದಂಡೆ |ಮಿಲಿಟರಿ ವಲಯಕ್ಕೆ ನುಗ್ಗಿದ ಇಸ್ರೇಲಿ ನಾಗರಿಕರು; ಸೈನಿಕರು, ವಾಹನಗಳ ಮೇಲೆ ದಾಳಿ, 6 ಮಂದಿ ಬಂಧನ
PC | REAUTERS (ಸಾಂದರ್ಭಿಕ ಚಿತ್ರ)
ಜೆರುಸಲೇಂ: ಆಕ್ರಮಿತ ಪಶ್ಚಿಮದಂಡೆಯಲ್ಲಿ ರವಿವಾರ ರಾತ್ರಿ ಇಸ್ರೇಲಿ ಮಿಲಿಟರಿಯ ಬಿನ್ಯಮಿನ್ ಬ್ರಿಗೇಡ್ ನ ಪ್ರಧಾನ ಕಚೇರಿಯ ಪ್ರವೇಶದ್ವಾರದ ಬಳಿ ಹಿಂಸಾತ್ಮಕ ಘಟನೆ ನಡೆದಿದ್ದು ಇಸ್ರೇಲಿ ನಾಗರಿಕರು ಭದ್ರತಾ ಪಡೆಗಳ ಮೇಲೆ ಹಲ್ಲೆ ನಡೆಸಿದರಲ್ಲದೆ ಮಿಲಿಟರಿ ವಾಹನಗಳನ್ನು ಹಾಗೂ ಭದ್ರತಾ ಠಾಣೆಯನ್ನು ಧ್ವಂಸಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಸೋಮವಾರ ಹೇಳಿದೆ.
ಬಿನ್ಯಮಿನ್ ಪ್ರಾದೇಶಿಕ ಬ್ರಿಗೇಡ್ ನ ಕಮಾಂಡರ್ ವಿರುದ್ಧ ಪಶ್ಚಿಮದಂಡೆಯಲ್ಲಿರುವ ಇಸ್ರೇಲಿ ನಾಗರಿಕರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಶುಕ್ರವಾರ ಫೆಲೆಸ್ತೀನ್ ಗ್ರಾಮ ಕಫರ್ ಮಲಿಕ್ ನ ಬಳಿಯಿದ್ದ ಮಿಲಿಟರಿ ವಲಯವನ್ನು ಪ್ರವೇಶಿಸಲು ಮುಂದಾಗಿದ್ದ ಇಸ್ರೇಲಿ ವಸಾಹತುಗಾರರನ್ನು ತಡೆಯಲು ಪ್ರಯತ್ನಿಸಿದ್ದ ಅಧಿಕಾರಿಗಳಲ್ಲಿ ಬಿನ್ಯಮಿನ್ ಬ್ರಿಗೇಡ್ ನ ಕಮಾಂಡರ್ ಕೂಡಾ ಸೇರಿದ್ದರು. ಅವರನ್ನು `ದೇಶದ್ರೋಹಿ' ಎಂದು ಕರೆದ ಪ್ರತಿಭಟನಾಕಾರರು ಬ್ರಿಗೇಡ್ ನ ಪ್ರಧಾನ ಕಚೇರಿಗೆ ನುಗ್ಗಲು ಪ್ರಯತ್ನಿಸಿದಾಗ ಭದ್ರತಾ ಪಡೆಗಳು ತಡೆದಿದ್ದಾರೆ. ಆಗ ಆಕ್ರೋಶಗೊಂಡ ಪ್ರತಿಭಟನಾಕಾರರ ತಂಡ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದು ಪೆಪ್ಪರ್ ಸ್ಪ್ರೇ ಸಿಂಪಡಿಸಿದರು. ಇಸ್ರೇಲ್ ಭದ್ರತಾ ಪಡೆ(ಐಡಿಎಫ್), ಪೊಲೀಸ್ ಮತ್ತು ಗಡಿ ಭದ್ರತಾ ಪಡೆಗಳು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ. ಘರ್ಷಣೆಯಲ್ಲಿ ಒಬ್ಬ ಇಸ್ರೇಲ್ ಪ್ರಜೆ ಗಾಯಗೊಂಡಿದ್ದಾನೆ ಎಂದು ಇಸ್ರೇಲ್ ಸೇನೆ ಹೇಳಿದೆ.
`ಐಡಿಎಫ್ ಮತ್ತು ಭದ್ರತಾ ಪಡೆಗಳ ವಿರುದ್ಧದ ಯಾವುದೇ ಹಿಂಸಾಚಾರವನ್ನು ಬಲವಾಗಿ ಖಂಡಿಸುವುದಾಗಿ ಇಸ್ರೇಲ್ ನ ವಿದೇಶಾಂಗ ಸಚಿವ ಗಿಡಿಯಾನ್ ಸಾ'ರ್ ಹೇಳಿದ್ದಾರೆ. ಇಂತಹ ಘಟನೆಗಳು ಸ್ವೀಕಾರಾರ್ಹವಲ್ಲ ಮತ್ತು ಅಪರಾಧಿಗಳಿಗೆ ತೀವ್ರ ಶಿಕ್ಷೆಯಾಗಬೇಕು. ಇಸ್ರೇಲ್ ನ ನಾಗರಿಕರ ರಕ್ಷಣೆ ಮತ್ತು ಭದ್ರತೆಯನ್ನು ಖಾತರಿಪಡಿಸಲು ಐಡಿಎಫ್ ಮತ್ತು ಭದ್ರತಾ ಪಡೆಗಳು ರಾತ್ರಿ -ಹಗಲು ಕೆಲಸ ಮಾಡುತ್ತಿವೆ. ನಾವು ಅವರನ್ನು ಬೆಂಬಲಿಸಬೇಕು, ಅವರ ಕಾರ್ಯಕ್ಕೆ ಅಡ್ಡಿಯಾಗಬಾರದು ಮತ್ತು ಯಾವುದೇ ಸಂದರ್ಭಗಳಲ್ಲೂ ಅವರ ಮೇಲೆ ದಾಳಿ ಮಾಡಬಾರದು ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಸ್ರೇಲ್ ನ ವಿತ್ತಸಚಿವ ಬೆಝಲೆಲ್ ಸ್ಮೊಟ್ರಿಚ್ ಅವರೂ ಘಟನೆಯನ್ನು ಖಂಡಿಸಿದ್ದು `ಕೆಂಪುಗೆರೆಯನ್ನು ದಾಟಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.