×
Ad

ಮೌನವಾಗಿರಲು ಸಾಧ್ಯವಿಲ್ಲ : ಗಾಝಾ ನರಮೇಧವನ್ನು ಖಂಡಿಸಿದ ಇಸ್ರೇಲ್‌ನ ಖ್ಯಾತ ಸಂಗೀತ ನಿರ್ದೇಶಕ

ಇಸ್ರೇಲ್‌ನಲ್ಲಿ ಸಂಗೀತ ಕಾರ್ಯಕ್ರಮ ನೀಡುವುದಿಲ್ಲ ಎಂದು ಘೋಷಿಸಿದ ಇಲಾನ್ ವೊಲ್ಕೋವ್

Update: 2025-09-17 12:10 IST

Screengrab:X/@Etanetan23

ಲಂಡನ್ : ಇಸ್ರೇಲ್‌ನ ಖ್ಯಾತ ಸಂಗೀತ ನಿರ್ದೇಶಕ, ಆರ್ಕೆಸ್ಟ್ರಾ ಕಂಡಕ್ಟರ್ ಇಲಾನ್ ವೊಲ್ಕೋವ್ ಗಾಝಾದಲ್ಲಿ ಸಾವಿರಾರು ಫೆಲೆಸ್ತೀನ್ ನಾಗರಿಕರ ಹತ್ಯೆ, ಸ್ಥಳಾಂತರ, ಆಸ್ಪತ್ರೆಗಳು ಮತ್ತು ಶಾಲೆಗಳ ಧ್ವಂಸಗಳ ಬಗ್ಗೆ ಧ್ವನಿಯೆತ್ತಿದ್ದು, ಗಾಝಾ ಮೇಲಿನ ಇಸ್ರೇಲ್ ಯುದ್ಧವನ್ನು ಕೊನೆಗೊಳಿಸುವಂತೆ ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ.

ಲಂಡನ್‌ನ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಇಸ್ರೇಲ್ ಕ್ರಮವನ್ನು ಖಂಡಿಸಿ ಇಲಾನ್ ವೊಲ್ಕೋವ್ ಮಾಡಿರುವ ಭಾವುಕ ಭಾಷಣಕ್ಕೆ ಪ್ರೇಕ್ಷಕರು ಅಚ್ಚರಿ ಪಟ್ಟಿದ್ದಾರೆ.

ನಾನು ಇಸ್ರೇಲ್‌ನಿಂದ ಬಂದಿದ್ದೇನೆ ಮತ್ತು ಅಲ್ಲಿ ವಾಸಿಸುತ್ತಿದ್ದೇನೆ. ನನಗೆ ಇಸ್ರೇಲ್ ಅಂದರೆ ತುಂಬಾ ಇಷ್ಟ, ಅದು ನನ್ನ ಮನೆಯಾಗಿದೆ. ಆದರೆ ಈಗ ಅಲ್ಲಿ ನಡೆಯುತ್ತಿರುವುದು ಭೀಕರ ಮತ್ತು ಊಹಿಸಲೂ ಅಸಾಧ್ಯವಾದಷ್ಟು ಭಯಾನಕವಾಗಿದೆ. ಗಾಝಾ ಮೇಲಿನ ಇಸ್ರೇಲ್ ಯುದ್ಧದಿಂದಾಗಿ ನಾನು ತೀವ್ರವಾಗಿ ನೋವನ್ನು ಅನುಭವಿಸುತ್ತೀದ್ದೇನೆ. ಇನ್ನೂ ಮೌನವಾಗಿರಲು ಸಾಧ್ಯವಿಲ್ಲ ಎಂದು ಇಲಾನ್ ವೊಲ್ಕೋವ್ ಹೇಳಿದ್ದಾರೆ.

ಸಾವಿರಾರು ನಿರಪರಾಧಿ ಫೆಲೆಸ್ತೀನ್ ನಾಗರಿಕರ ಹತ್ಯೆ ನಡೆಯುತ್ತಿದೆ. ಅವರಿಗೆ ಆಸ್ಪತ್ರೆಗಳಿಲ್ಲ, ಶಾಲೆಗಳಿಲ್ಲ, ಮುಂದಿನ ಊಟ ಯಾವಾಗ ಸಿಗುತ್ತದೆ ಎಂಬುದೂ ಕೂಡ ಗೊತ್ತಿಲ್ಲ. ಕಳೆದುಹೋಗುವ ಪ್ರತಿ ಕ್ಷಣವೂ ಲಕ್ಷಾಂತರ ಜನರ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಇದು ಇನ್ನು ಮುಂದುವರೆಯಬಾರದು ಎಂದು ಇಲಾನ್ ವೊಲ್ಕೋವ್ ಹೇಳಿದರು.

ಕಾರ್ಯಕ್ರಮದ ನಂತರ ಸಂದರ್ಶನವೊಂದರಲ್ಲಿ ಮಾತನಾಡಿದ ವೊಲ್ಕೋವ್ , ಗಾಝಾದ ಮೇಲಿನ ಯುದ್ಧವನ್ನು ವಿರೋಧಿಸಿ ಇನ್ನು ಮುಂದೆ ಇಸ್ರೇಲ್‌ನಲ್ಲಿ ನಾನು ಸಂಗೀತ ಕಾರ್ಯಕ್ರಮ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News