ಇರಾನ್ ಜೊತೆಗಿನ ಸಂಘರ್ಷಕ್ಕೆ ಸೇರಬೇಡಿ: ಇಸ್ರೇಲ್ ರಕ್ಷಣಾ ಸಚಿವರಿಂದ ಹಿಜ್ಬುಲ್ಲಾಗೆ ಎಚ್ಚರಿಕೆ
ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ | PC ; X \ @Israel_katz
ಟೆಲ್ ಅವೀವ್: ಇಸ್ರೇಲ್ ಗೆ ಬೆದರಿಕೆ ಹಾಕುವ ಬಂಡುಕೋರರ ಕುರಿತು ನಮಗೆ ತಾಳ್ಮೆ ಕ್ಷೀಣಿಸಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು ಲೆಬನಾನ್‌ನ ಹಿಜ್ಬುಲ್ಲಾಗೆ ಎಚ್ಚರಿಕೆ ನೀಡಿದ್ದಾರೆ.
"ಹಿಜ್ಬುಲ್ಲಾ ಪ್ರಧಾನ ಕಾರ್ಯದರ್ಶಿಯು ಈ ಹಿಂದಿನ ಘಟನೆಗಳಿಂದ ಪಾಠ ಕಲಿಯುತ್ತಿಲ್ಲ. ಅವರು ಇರಾನಿನ ಸರ್ವಾಧಿಕಾರಿಯ ಆದೇಶಗಳಿಗೆ ಅನುಗುಣವಾಗಿ ಇಸ್ರೇಲ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾರೆ" ಎಂದು ಕ್ಯಾಟ್ಜ್ X ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಹಿಜ್ಬುಲ್ಲಾ ವಿರುದ್ಧ ಇಸ್ರೇಲ್ ನಡೆಸಿದ ಕಾರ್ಯಾಚರಣೆಯಲ್ಲಿ ಹಿಜ್ಬುಲ್ಲಾದ ನಾಯಕ ಹಸನ್ ನಸ್ರಲ್ಲಾ ಅವರನ್ನು ಹತ್ಯೆ ಮಾಡಲಾಗಿತ್ತು.
"ಲೆಬನಾನಿನ ಪ್ರತಿನಿಧಿಗಳು ಜಾಗರೂಕರಾಗಿರಿ. ಇಸ್ರೇಲ್‌ಗೆ ಬೆದರಿಕೆ ಹಾಕುವ ಬಂಡುಕೋರರ ಬಗ್ಗೆ ಇಸ್ರೇಲ್ ತಾಳ್ಮೆ ಕಳೆದುಕೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದು ನಾನು ಸೂಚಿಸುತ್ತೇನೆ", ಎಂದು ಅವರು ಎಚ್ಚರಿಕೆಯ ಸಂದೇಶದಲ್ಲಿ ತಿಳಿಸಿದ್ದಾರೆ.
ಹಿಜ್ಬುಲ್ಲಾ ಮುಖ್ಯಸ್ಥ ನಯೀಮ್ ಖಾಸ್ಸೆಮ್ ಅವರು ಗುರುವಾರ, ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕದ ಕ್ರೂರ ಕಾರ್ಯಾಚರಣೆ ನಡೆಯುತ್ತಿದೆ. ಇದಕ್ಕೆ ಹಿಜ್ಬುಲ್ಲಾ ತಕ್ಕುದಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡಲಿದೆ ಎಂದು ಹೇಳಿಕೆ ನೀಡಿದ್ದರು.