ಗಾಝಾ ನಗರ ಪ್ರವೇಶಿಸಿದ ಇಸ್ರೇಲ್ ಪಡೆ : ನಾಗರಿಕರ ನಿರ್ಗಮನಕ್ಕೆ `ತಾತ್ಕಾಲಿತ ಮಾರ್ಗ'ದ ಘೋಷಣೆ
PC : aljazeera.com
ಗಾಝಾ, ಸೆ.17: ತನ್ನ ಪಡೆಗಳು ಗಾಝಾ ನಗರವನ್ನು ಪ್ರವೇಶಿಸಿರುವುದಾಗಿ ಇಸ್ರೇಲ್ ಬುಧವಾರ ಅಧಿಕೃತವಾಗಿ ಘೋಷಿಸಿದ್ದು ನಗರದಿಂದ ನಿರ್ಗಮಿಸಲು ನಾಗರಿಕರಿಗೆ ಅವಕಾಶ ಮಾಡಿಕೊಡಲು ತಾತ್ಕಾಲಿಕ ಸಾರಿಗೆ ಮಾರ್ಗ ತೆರೆದಿರುವುದಾಗಿ ಹೇಳಿದೆ.
ಸಲಾಹ್ ಅಲ್ದೀನ್ ರಸ್ತೆಯ ಮೂಲಕ ಸಾಗುವ ತಾತ್ಕಾಲಿಕ ಸಾರಿಗೆ ಮಾರ್ಗವು 48 ಗಂಟೆ ಮಾತ್ರ ತೆರೆದಿರುತ್ತದೆ. ಈ ಅವಕಾಶವನ್ನು ಬಳಸಿಕೊಂಡು ದಕ್ಷಿಣದತ್ತ ತೆರಳುವಂತೆ ಇಸ್ರೇಲ್ ಮಿಲಿಟರಿ ವಕ್ತಾರ ಅವಿಚಯ್ ಅದ್ರಾಯಿ ನಿವಾಸಿಗಳನ್ನು ಒತ್ತಾಯಿಸಿದ್ದಾರೆ. ಮಂಗಳವಾರ ಗಾಝಾ ನಗರದಲ್ಲಿ ಭೂದಾಳಿ ಆರಂಭಿಸಿದ್ದ ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್), ಹಮಾಸ್ ಹೋರಾಟಗಾರರ ಭದ್ರಕೋಟೆ ಎನಿಸಿರುವ ಗಾಝಾವನ್ನು ಪ್ರವೇಶಿಸಿರುವುದಾಗಿ ಬುಧವಾರ ಅಧಿಕೃತವಾಗಿ ಘೋಷಿಸಿದೆ.
ಯುದ್ಧದಿಂದ ಜರ್ಝರಿತಗೊಂಡಿರುವ ಪ್ರದೇಶದ ಅತೀ ದೊಡ್ಡ ನಗರ ಕೇಂದ್ರದ ಮೇಲಿನ ದಾಳಿಯ ಏಕೈಕ ಉದ್ದೇಶ ಹಮಾಸ್‍ನ ಮಿಲಿಟರಿ ಮೂಲ ಸೌಕರ್ಯಗಳನ್ನು ನಾಶಗೊಳಿಸುವುದಾಗಿದೆ. ಇದಕ್ಕೆ ಯಾವುದೇ ಸಮಯದ ಮಿತಿಯನ್ನು ನಿಗದಿಗೊಳಿಸಿಲ್ಲ. ಟ್ಯಾಂಕ್‍ಗಳು ಮೂರು ದಿಕ್ಕುಗಳಿಂದ ಗಾಝಾ ನಗರದ ಮಧ್ಯ ಮತ್ತು ಪಶ್ಚಿಮ ಭಾಗದತ್ತ ಮುನ್ನುಗ್ಗುತ್ತಿವೆ. ನಾಗರಿಕರನ್ನು ದಕ್ಷಿಣದತ್ತ ಸ್ಥಳಾಂತರಿಸಿ ಮುಂದಿನ ತಿಂಗಳಿನಲ್ಲಿ ಹೋರಾಟವನ್ನು ತೀವ್ರಗೊಳಿಸುವ ಉದ್ದೇಶವಿದೆ ಎಂದು ಇಸ್ರೇಲ್ ಮಿಲಿಟರಿಯನ್ನು ಉಲ್ಲೇಖಿಸಿ ಮಾಧ್ಯಮ ವರದಿ ಹೇಳಿದೆ.
ಸುಮಾರು 1 ಲಕ್ಷ ನಾಗರಿಕರು ಗಾಝಾದಲ್ಲೇ ಉಳಿಯಬಹುದು ಎಂದು ಇಸ್ರೇಲ್ ನಿರೀಕ್ಷಿಸಿದ್ದು ನಗರವನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆ ಕೆಲ ತಿಂಗಳು ಮುಂದುವರಿಯಬಹುದು. ಒಂದು ವೇಳೆ ಹಮಾಸ್ ಜೊತೆ ಕದನ ವಿರಾಮ ಒಪ್ಪಂದ ಏರ್ಪಟ್ಟರೆ ಕಾರ್ಯಾಚರಣೆಯನ್ನು ಅಮಾನತುಗೊಳಿಸಲಾಗುವುದು ಎಂದು ಇಸ್ರೇಲ್ ಸೇನೆಯ ಮೂಲಗಳು ಹೇಳಿವೆ. ಈ ಮಧ್ಯೆ, ಇಸ್ರೇಲ್ ದಾಳಿಯಿಂದಾಗಿ ಮಂಗಳವಾರ ರಾತ್ರಿಯಿಂದ ಗಾಝಾ ನಗರದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ ಗಾಝಾ ನಗರದ ರಾಂಟಿಸಿ ಮಕ್ಕಳ ಆಸ್ಪತ್ರೆಯ ಮೇಲೆಯೂ ದಾಳಿ ನಡೆದಿರುವುದಾಗಿ ಆಸ್ಪತ್ರೆಯ ಮೂಲಗಳನ್ನು ಉಲ್ಲೇಖಿಸಿ `ದಿ ಅಸೋಸಿಯೇಟೆಡ್ ಪ್ರೆಸ್' ಬುಧವಾರ ವರದಿ ಮಾಡಿದೆ.
ಹತ್ಯಾಕಾಂಡ ನಿಲ್ಲಿಸಿ: ಇಸ್ರೇಲ್‍ಗೆ ಯುಎನ್‍ಎಚ್‍ಸಿಆರ್ ಆಗ್ರಹ
ಗಾಝಾ ನಗರದಲ್ಲಿ ಭೂ ದಾಳಿಯನ್ನು ತಕ್ಷಣ ನಿಲ್ಲಿಸುವಂತೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಮಿಷನ್(ಯುಎನ್‍ಎಚ್‍ಸಿಆರ್) ಇಸ್ರೇಲನ್ನು ಆಗ್ರಹಿಸಿದ್ದು ಯುದ್ಧಾಪರಾಧಗಳು, ಮಾನವೀಯತೆಯ ವಿರುದ್ಧದ ಅಪರಾಧಗಳ ಪುರಾವೆಗಳು ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದೆ.
`ಮತ್ತೊಮ್ಮೆ ದಾಳಿಗೆ ಸಿಲುಕುವ ಮಹಿಳೆಯರ, ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ, ವಿಕಲಾಂಗರ ಪರಿಸ್ಥಿತಿಯನ್ನು ಊಹಿಸಲೂ ಕಷ್ಟವಾಗುತ್ತದೆ. ಫೆಲೆಸ್ತೀನೀಯರು, ಇಸ್ರೇಲಿಯನ್ನರು ಶಾಂತಿಗಾಗಿ ಮೊರೆಯಿಡುತ್ತಿದ್ದಾರೆ. ಗಾಝಾದಲ್ಲಿನ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ಆಕ್ರಮಣವನ್ನು ಕೊನೆಗೊಳಿಸಬೇಕೆಂದು ಎಲ್ಲರೂ ಬಯಸುತ್ತಾರೆ' ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಹೈಕಮಿಷನರ್ ವೋಕರ್ ಟರ್ಕ್ ಹೇಳಿದ್ದು ಗಾಝಾದ ಅನಪೇಕ್ಷಿತ ವಿನಾಶವನ್ನು ತಡೆಯುವಂತೆ ಇಸ್ರೇಲ್‍ಗೆ ಕರೆ ನೀಡಿದ್ದಾರೆ.
ನರಮೇಧ ವ್ಯವಸ್ಥಿತ ಯುದ್ಧದ ಹೊಸ ಅಧ್ಯಾಯ: ಹಮಾಸ್ ಖಂಡನೆ
ಗಾಝಾದಲ್ಲಿ ಇಸ್ರೇಲ್ ಮಂಗಳವಾರ ನಡೆಸಿದ ವ್ಯಾಪಕ ಭೂದಾಳಿಯನ್ನು ಖಂಡಿಸಿರುವ ಹಮಾಸ್ ಜಾಗತಿಕ ಸಮುದಾಯ, ವಿಶೇಷವಾಗಿ ಅರಬ್ ಮತ್ತು ಮುಸ್ಲಿಮ್ ರಾಷ್ಟ್ರಗಳು ಮಧ್ಯಪ್ರವೇಶಿಸಿ ಮಿಲಿಟರಿ ಕಾರ್ಯಾಚರಣೆಯನ್ನು ಕೊನೆಗೊಳಿಸಲು ಇಸ್ರೇಲನ್ನು ಬಲವಂತಪಡಿಸಬೇಕೆಂದು ಆಗ್ರಹಿಸಿದೆ.
ಗಾಝಾದಲ್ಲಿ ಇಸ್ರೇಲ್‍ನ ಕಾರ್ಯಾಚರಣೆಯು ` ಯಹೂದಿವಾದದ ಅನಾಗರಿಕ ಉಲ್ಬಣವಾಗಿದೆ ಮತ್ತು ಫೆಲೆಸ್ತೀನೀಯರ ವಿರುದ್ಧದ ನರಮೇಧದ ವ್ಯವಸ್ಥಿತ ಯುದ್ಧದಲ್ಲಿ ಹೊಸ ಅಧ್ಯಾಯವಾಗಿದೆ' ಎಂದು ಹಮಾಸ್ ಖಂಡಿಸಿರುವುದಾಗಿ ಸಿಎನ್‍ಎನ್ ವರದಿ ಮಾಡಿದೆ. ಗಾಝಾದಲ್ಲಿ ಹಿಂಸಾಚಾರ ಉಲ್ಬಣಿಸಿರುವಂತೆಯೇ ಸಾವಿರಾರು ಫೆಲೆಸ್ತೀನೀಯರು ದಕ್ಷಿಣದ ಡೀರ್ ಅಲ್‍ಬಲಾಹ್ ನಗರದತ್ತ ತೆರಳುತ್ತಿರುವುದಾಗಿ ವರದಿಯಾಗಿದೆ.