ಇಸ್ರೇಲ್- ಹಮಾಸ್ ಕದನ ವಿರಾಮ ಇಂದು ಜಾರಿ: 13 ಒತ್ತೆಯಾಳುಗಳ ಬಿಡುಗಡೆ ನಿರೀಕ್ಷೆ
Photo: twitter/ANI
ಗಾಝಾ: ಇಸ್ರೇಲ್ ಪಡೆಗಳು ಮತ್ತು ಹಮಾಸ್ ಹೋರಾಟಗಾರರ ನಡುವೆ ಏರ್ಪಟ್ಟಿರುವ ನಾಲ್ಕು ದಿನಗಳ ಕದನ ವಿರಾಮ ಶುಕ್ರವಾರ ಬೆಳಿಗ್ಗೆ ಆರಂಭವಾಗಲಿದ್ದು, ಹಮಾಸ್ ಒತ್ತೆಯಾಳುಗಳಾಗಿ ಇರಿಸಿಕೊಂಡಿರುವ 13 ಮಂದಿ ಇಸ್ರೇಲಿ ಮಹಿಳೆಯರು ಮತ್ತು ಮಕ್ಕಳನ್ನು ಇಂದು ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಕದನ ವಿರಾಮಕ್ಕೆ ಮುನ್ನ ರಾಯ್ಟರ್ಸ್ ಗೆ ಹೇಳಿಕೆ ನೀಡಿರುವ ಅಧಿಕಾರಿಗಳು, ಗಾಝಾದ ಆಸ್ಪತ್ರೆಗಳು ಬಾಂಬ್ ದಾಳಿಗೆ ಗುರಿಯಾಗಿದೆ . ತಾತ್ಕಾಲಿಕ ವಿರಾಮದ ಬಳಿಕ ಮತ್ತೆ ಹೋರಾಟ ಆರಂಭವಾಗಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.
"ಇವು ಸಂಕೀರ್ಣ ದಿನಗಳು ಹಾಗೂ ಯಾವುದೂ ನಿಶ್ಚಿತವಾಗಿಲ್ಲ. ಈ ಪ್ರಕ್ರಿಯೆಯ ಅವಧಿಯಲ್ಲಿ ಕೂಡಾ ಬದಲಾವಣೆಗಳು ಆಗಬಹುದು. ಉತ್ತರ ಗಾಝಾದ ನಿಯಂತ್ರಣ ಸುಧೀರ್ಘ ಹೋರಾಟದ ಮೊದಲ ಹೆಜ್ಜೆ. ಮುಂದಿನ ಹಂತಗಳಿಗೆ ನಾವು ಸಜ್ಜಾಗುತ್ತಿದ್ದೇವೆ" ಎಂದು ಇಸ್ರೇಲ್ ಸೇನಾ ವಕ್ತಾರ ಡೇನಿಯಲ್ ಹಗರಿ ಹೇಳಿದ್ದಾರೆ.
ತಾತ್ಕಾಲಿಕ ಕದನ ವಿರಾಮ ಸ್ಥಳೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 7ಕ್ಕೆ ಆರಂಭವಾಗಲಿದೆ. ಇದರಲ್ಲಿ ಉತ್ತರ ಹಾಗೂ ದಕ್ಷಿಣ ಗಾಝಾದಲ್ಲಿ ಸಮಗ್ರ ಕದನ ವಿರಾಮವೂ ಸೇರಿದೆ" ಎಂದು ಕತಾರ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಸಂಜೆ 4ರ ವೇಳೆಗೆ ಒತ್ತೆಯಾಳುಗಳ ಮೊದಲ ಗುಂಪನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದ್ದು, ಗಾಝಾಗೆ ಈ ಸಂದರ್ಭದಲ್ಲಿ ಅಗತ್ಯ ನೆರವು ಹರಿದು ಬರಲಿದೆ ಎಂದು ವಕ್ತಾರ ಮಜೀದ್ ಅಲ್ ಅನ್ಸಾರಿ ದೋಹಾದಲ್ಲಿ ಹೇಳಿದ್ದಾರೆ.
ಮುಂದಿನ ನಾಲ್ಕು ದಿನಗಳಲ್ಲಿ ಒಟ್ಟು 50 ಮಂದಿಯನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಇದೇ ಸಂದರ್ಭದಲ್ಲಿ ಇಸ್ರೇಲಿ ಜೈಲುಗಳಿಂದ ಫೆಲಸ್ತೀನಿಯನ್ನರನ್ನೂ ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.