ಗಾಝಾದಲ್ಲಿ ಪರ್ಯಾಯ ಆಯ್ಕೆಗಳ ಪರಿಗಣನೆ: ಇಸ್ರೇಲ್ ಪ್ರಧಾನಿ ನೆತನ್ಯಾಹು
Update: 2025-07-26 23:00 IST
ಜೆರುಸಲೇಂ, ಜು.26: ಹಮಾಸ್ ಜೊತೆಗಿನ ಕದನ ವಿರಾಮ ಮಾತುಕತೆಯಿಂದ ಇಸ್ರೇಲ್ ಮತ್ತು ಅಮೆರಿಕ ತಮ್ಮ ನಿಯೋಗಗಳನ್ನು ವಾಪಾಸು ಕರೆಸಿಕೊಂಡ ಬಳಿಕ ಕದನ ವಿರಾಮ ಮಾತುಕತೆಗೆ ಪರ್ಯಾಯ ಆಯ್ಕೆಗಳನ್ನು ತಮ್ಮ ಸರಕಾರ ಪರಿಗಣಿಸುತ್ತಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
` ಒತ್ತೆಯಾಳು ಬಿಡುಗಡೆ ಒಪ್ಪಂದಕ್ಕೆ ಹಮಾಸ್ ತೊಡಕಾಗಿದೆ. ನಮ್ಮ ಅಮೆರಿಕ ಮಿತ್ರರಾಷ್ಟ್ರಗಳೊಂದಿಗೆ ನಮ್ಮ ಒತ್ತೆಯಾಳುಗಳನ್ನು ಮನೆಗೆ ತರಲು, ಹಮಾಸ್ ನ ಭಯೋತ್ಪಾದಕ ಆಡಳಿತವನ್ನು ಕೊನೆಗೊಳಿಸಲು ಮತ್ತು ಪ್ರದೇಶದಲ್ಲಿ ಹಾಗೂ ಇಸ್ರೇಲ್ ನಲ್ಲಿ ಶಾಶ್ವತ ಶಾಂತಿ ಸ್ಥಾಪಿಸಲು ನಾವು ಈಗ ಪರ್ಯಾಯ ಆಯ್ಕೆಗಳನ್ನು ಪರಿಗಣಿಸುತ್ತಿದ್ದೇವೆ' ಎಂದವರು ಹೇಳಿದ್ದಾರೆ. ಇದರೊಂದಿಗೆ ಕದನ ವಿರಾಮ ಒಪ್ಪಂದ ಮಾತುಕತೆಯ ಭವಿಷ್ಯಕ್ಕೆ ಅನಿಶ್ಚಿತತೆ ಎದುರಾಗಿದೆ.