ಅಮೆರಿಕ ಮಧ್ಯಪ್ರವೇಶಿಸದಿದ್ದರೆ 'ನಮಗೆ ಏನು ಮಾಡಬೇಕೆಂದು ತಿಳಿದಿದೆ' ಎಂದ ಇಸ್ರೇಲ್ ಅಧ್ಯಕ್ಷ
ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ (Photo:X/@Isaac_Herzog)
ಟೆಲ್ ಅವೀವ್: ಇರಾನ್ ನೊಂದಿಗಿನ ಯುದ್ಧದಲ್ಲಿ ಅಮೆರಿಕವು ಮಧ್ಯಪ್ರವೇಶಿಸದಿದ್ದರೆ ಏನು ಮಾಡಬೇಕೆಂದು ನಮಗೆ ತಿಳಿದಿದೆ ಎಂದು ಇಸ್ರೇಲ್ ನ ಅಧ್ಯಕ್ಷ, ಐಸಾಕ್ ಹೆರ್ಜಾಗ್ ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ.
ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಅಮೆರಿಕ ಮಧ್ಯಪ್ರವೇಶಿಸಬೇಕೇ ಬೇಡವೇ ಎನ್ನುವುದರ ಕುರಿತು ಎರಡು ವಾರಗಳಲ್ಲಿ ಉತ್ತರಿಸುತ್ತೇನೆ ಎಂದು ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿಯ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಇಸ್ರೇಲ್ ನ ಅಧ್ಯಕ್ಷ ಐಸಾಕ್ ಹೆರ್ಜಾಗ್, ಅಮೆರಿಕವು ಮಧ್ಯಪ್ರವೇಶಿಸದಿದ್ದರೆ ಮಾಡದಿದ್ದರೆ ಏನು ಮಾಡಬೇಕೆಂದು ನಮಗೆ ತಿಳಿದಿದೆ. ಇರಾನ್ ನೊಂದಿಗಿನ ಬಿಕ್ಕಟ್ಟಿಗೆ ರಾಜತಾಂತ್ರಿಕತೆಯು ಯಾವಾಗಲೂ ಪರಿಹಾರದ ಭಾಗವಾಗಬಹುದು ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇದುವರೆಗೂ ಕಾದುನೋಡಿ ಎಂದು ಹೇಳಿಕೆ ನೀಡುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಮ್ಮೆಲೇ ವರಸೆ ಬದಲಾಯಿಸಿದ್ದಾರೆ. ಅಮೆರಿಕದ ಸಹಾಯವಿಲ್ಲದೆ ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲ ಎಂದು ಇರಾನ್ ಸರ್ಕಾರ ಹೇಳಿಕೆ ನೀಡುತ್ತಲೇ ಬಂದಿತ್ತು.
ಒಂದು ವಾರದಿಂದ ಇರಾನ್ ಮತ್ತು ಇಸ್ರೇಲ್ ಮದ್ಯೆ ನಡೆಯುತ್ತಿರುವ ಸಂಘರ್ಷ ತೀವ್ರವಾಗುತ್ತಿದ್ದಂತೆ ಇಸ್ರೇಲ್ ಅಧ್ಯಕ್ಷರ ಈ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.
ಈ ಮಧ್ಯೆ ಬರುತ್ತಿರುವ ವರದಿಗಳು ಇಸ್ರೇಲ್ ನ ಏರ್ ಡಿಫೆನ್ಸ್ ಸಿಸ್ಟಮ್ ದುರ್ಬಲವಾಗುತ್ತಿದೆ ಎಂದು ಹೇಳುತ್ತಿವೆ.