ಗಾಝಾ ಪಟ್ಟಿ: ಇಸ್ರೇಲ್ ಪಡೆಯ ದಾಳಿಯಲ್ಲಿ 51 ಮಂದಿ ಮೃತ್ಯು
ಸಾಂದರ್ಭಿಕ ಚಿತ್ರ | PC : NDTV
ಗಾಝಾ: ಗಾಝಾ ಪಟ್ಟಿಯ ಖಾನ್ ಯೂನಿಸ್ ನಗರದಲ್ಲಿ ಆಹಾರ ಪಡೆಯಲು ಗುಂಪು ಸೇರಿದ್ದ ಜನರತ್ತ ಇಸ್ರೇಲ್ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 51 ಮಂದಿ ಮೃತಪಟ್ಟಿದ್ದು 200ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಖಾನ್‍ಯೂನಿಸ್ ನಗರದಲ್ಲಿ ನಿಂತಿದ್ದ ಟ್ರಕ್‍ನಿಂದ ಆಹಾರ ಪಡೆಯಲು ಸೇರಿದ್ದ ಜನರ ಗುಂಪಿನ ಮೇಲೆ ಇಸ್ರೇಲ್ ಪಡೆ ಕ್ಷಿಪಣಿ ದಾಳಿ ನಡೆಸಿದರೆ ಹತ್ತಿರದಲ್ಲೇ ಇದ್ದ ಇಸ್ರೇಲ್‍ನ ಟ್ಯಾಂಕ್‍ಗಳು ಶೆಲ್ ದಾಳಿ ನಡೆಸಿದಾಗ 51ಕ್ಕೂ ಅಧಿಕ ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.
ಖಾನ್‍ಯೂನಿಸ್ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಇಸ್ರೇಲ್ ಭದ್ರತಾ ಪಡೆಯ(ಐಡಿಎಫ್) ಸಮೀಪದಲ್ಲಿರುವ ಆಹಾರ ನೆರವು ವಿತರಣಾ ಕೇಂದ್ರದ ಬಳಿ ನಿಂತಿದ್ದ ಟ್ರಕ್‍ನ ಬಳಿ ಗುಂಪು ಸೇರಿದ್ದ ಜನರನ್ನು ನಿಯಂತ್ರಿಸಲು ನಡೆಸಿದ ಪ್ರಯತ್ನದಲ್ಲಿ ಹಲವರು ಗಾಯಗೊಂಡಿದ್ದು ಈ ಘಟನೆಯ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.