×
Ad

ಆಕ್ರಮಿತ ಪ್ರದೇಶಗಳಲ್ಲಿ ಇಸ್ರೇಲ್‍ ನಿಂದ ಆರ್ಥಿಕ ಬಿಗಿ ಹಿಡಿತ; ಆರ್ಥಿಕ ತುರ್ತು ಪರಿಸ್ಥಿತಿಯ ಅಪಾಯ: ವಿಶ್ವಸಂಸ್ಥೆ ತಜ್ಞರ ವರದಿ

Update: 2025-09-15 21:33 IST

 ವಿಶ್ವಸಂಸ್ಥೆ | PC : UN 

ನ್ಯೂಯಾರ್ಕ್, ಸೆ.15: ಗಾಝಾದ ಮೇಲಿನ ಇಸ್ರೇಲ್ ಆಕ್ರಮಣ ಮತ್ತು ಆಕ್ರಮಿತ ಪ್ರದೇಶದಾದ್ಯಂತ ವ್ಯಾಪಕ ಆರ್ಥಿಕ ನಿಯಂತ್ರಣವು ಗಂಭೀರ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಪ್ರಚೋದಿಸಿದೆ ಎಂದು ವಿಶ್ವಸಂಸ್ಥೆಯ ತಜ್ಞರು ಸೋಮವಾರ ಎಚ್ಚರಿಕೆ ನೀಡಿದ್ದು ಮಾನವ ಹಕ್ಕುಗಳ ಮೇಲೆ ದುರಂತ ಹಾನಿಯುಂಟು ಮಾಡುವ ಕ್ರಮಗಳನ್ನು ತಕ್ಷಣ ಕೊನೆಗೊಳಿಸುವಂತೆ ಆಗ್ರಹಿಸಿದ್ದಾರೆ.

ಗಾಝಾದಲ್ಲಿನ ಆರ್ಥಿಕ ಜೀವನವು ತೀವ್ರ ದೈಹಿಕ ವಿನಾಶ, ದಿಗ್ಬಂಧನ, ಮುತ್ತಿಗೆ ಮತ್ತು ಪುನರಾವರ್ತಿತ ಬಲವಂತದ ಸ್ಥಳಾಂತರದಿಂದ ನಾಶವಾಗಿದೆ. ಫೆಲೆಸ್ತೀನಿಯನ್ ಪ್ರದೇಶದಲ್ಲಿ ವಾಣಿಜ್ಯ, ಕೃಷಿ ಮತ್ತು ಕೈಗಾರಿಕಾ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯಾಗಿದ್ದು ನಿರುದ್ಯೋಗದ ಪ್ರಮಾಣ 80%ಕ್ಕೂ ಮೀರಿದೆ. ವ್ಯಾಪಾರ, ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದ್ದು ಬರಗಾಲ ಘೋಷಣೆಯಾಗಿದೆ. ಬ್ಯಾಂಕ್‍ಗಳು ಮತ್ತು ಎಟಿಎಂಗಳಿಗೆ ಹಾನಿಯಾಗಿರುವುದು ನಗದು ಬಿಕ್ಕಟ್ಟು ಉಲ್ಬಣಿಸಿದೆ. ಹೊಸ ಕರೆನ್ಸಿಗಳ ಒಳಹರಿವನ್ನು ಇಸ್ರೇಲ್ ನಿರ್ಬಂಧಿಸಿದೆ. ನಗದಿನ ಕೊರತೆಯು ಅಧಿಕ ಹಣದುಬ್ಬರವನ್ನು ಪ್ರಚೋದಿಸಿದ್ದು ವಿದ್ಯುತ್ ಮತ್ತು ದೂರಸಂಪರ್ಕ ನಿಲುಗಡೆಯು ಡಿಜಿಟಪ್ ಪಾವತಿಗೆ ಅಡ್ಡಿಯಾಗಿದೆ. ಇಸ್ರೇಲ್‍ ನ ದಿಗ್ಬಂಧನ ಮತ್ತು ಮುತ್ತಿಗೆಯಿಂದ ಉಂಟಾಗಿರುವ ಅಪಾರ ನಾಗರಿಕ ಹಾನಿಯು ಅಂತರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಫೆಲೆಸ್ತೀನೀಯರ ಆರ್ಥಿಕ ಮತ್ತು ಸಾಮಾಜಿಕ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ವಿಶ್ವಸಂಸ್ಥೆಯ ತಜ್ಞರ ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ವಿಶ್ವಸಂಸ್ಥೆಯ ನೆರವು ಮತ್ತು ಪರಿಹಾರ ಏಜೆನ್ಸಿಯ ಕಾರ್ಯವನ್ನು ಇಸ್ರೇಲ್ ನಿರ್ಬಂಧಿಸಿರುವುದು ಮತ್ತು ಅಮೆರಿಕವು ಆರ್ಥಿಕ ನೆರವನ್ನು ಅಮಾನತುಗೊಳಿಸಿರುವುದು ಆರ್ಥಿಕ ಕುಸಿತದಿಂದ ಕಂಗೆಟ್ಟಿರುವ ಗಾಝಾದಲ್ಲಿ ಸಾವಿರಾರು ಉದ್ಯೋಗಗಳಿಗೆ ಅಪಾಯವುಂಟು ಮಾಡಿದೆ ಮತ್ತು ಮಾನವೀಯ ನೆರವಿನ ಪ್ರಯತ್ನಗಳನ್ನು ದುರ್ಬಲಗೊಳಿಸಿದೆ ಎಂದು ಹೇಳಿಕೆ ತಿಳಿಸಿದೆ.

ತೆರಿಗೆ ಆದಾಯ ತಡೆಹಿಡಿದ ಇಸ್ರೇಲ್

ಗಾಝಾದಲ್ಲಷ್ಟೇ ಅಲ್ಲ, ಆಕ್ರಮಿತ ಪಶ್ಚಿಮ ದಂಡೆಯಾದ್ಯಂತ ಇಸ್ರೇಲ್‍ ನ ಆರ್ಥಿಕ ಒತ್ತಡ ತೀವ್ರಗೊಂಡಿದ್ದು ಫೆಲೆಸ್ತೀನಿಯನ್ ಪ್ರಾಧಿಕಾರಕ್ಕೆ ಸಲ್ಲಬೇಕಾದ ತೆರಿಗೆ ಆದಾಯವನ್ನು ಇಸ್ರೇಲ್ ತಡೆಹಿಡಿದಿದೆ ಮತ್ತು ಸ್ವ ಉದ್ದೇಶಕ್ಕೆ ಬಳಸಿರುವುದು ಓಸ್ಲೋ ಒಪ್ಪಂದದ ಉಲ್ಲಂಘನೆಯಾಗಿದೆ. ಇದರಿಂದ ವೇತನ ಪಾವತಿಗೆ ಅಡ್ಡಿಯಾಗಿದೆ ಎಂದು ವರದಿ ಹೇಳಿದೆ.

1 ಲಕ್ಷಕ್ಕೂ ಅಧಿಕ ಫೆಲೆಸ್ತೀನಿಯನ್ ಕೆಲಸಗಾರರ ವರ್ಕ್ ಪರ್ಮಿಟ್‍ ಗಳನ್ನು ಇಸ್ರೇಲ್ ಅಮಾನತುಗೊಳಿಸಿರುವುದು ನಗದು ಹರಿವಿನ ಪ್ರಮುಖ ಮೂಲವನ್ನು ಅಳಿಸಿ ಹಾಕಿದಂತಾಗಿದೆ ಎಂದು ವಿಶ್ವಸಂಸ್ಥೆ ತಜ್ಞರ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News