ರೂಪಾಯಿ ಅಂತರಾಷ್ಟ್ರೀಕರಣದ ಉದ್ದೇಶ: ಜೈಶಂಕರ್ ಸ್ಪಷ್ಟನೆ
ಎಸ್. ಜೈಶಂಕರ್ | PC : PTI
ಲಂಡನ್: ಅಮೆರಿಕದ ಡಾಲರ್ ಅನ್ನು ವಿಶ್ವದ ಪ್ರಾಥಮಿಕ ಮೀಸಲು ಕರೆನ್ಸಿ ಸ್ಥಾನಮಾನದಿಂದ ಬದಲಿಸಲು ಭಾರತ ಪ್ರಯತ್ನಿಸುತ್ತಿದೆ ಎಂಬ ಊಹಾಪೋಹಗಳನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಳ್ಳಿಹಾಕಿದ್ದಾರೆ.
ಬ್ರಿಟನ್‍ಗೆ ನೀಡಿರುವ ಭೇಟಿ ಸಂದರ್ಭ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್ `ಅಮೆರಿಕದ ಡಾಲರ್‍ಗೆ ಪರ್ಯಾಯ ಕರೆನ್ಸಿಯನ್ನು ಬಿಂಬಿಸುವ ಉದ್ದೇಶವಿಲ್ಲ. ಆದರೆ ಭಾರತವು ರೂಪಾಯಿ ಅಂತರಾಷ್ಟ್ರೀಕರಣದ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ' ಎಂದಿದ್ದಾರೆ. ಡಾಲರ್‍ಗೆ ಪರ್ಯಾಯ ಕರೆನ್ಸಿ ರೂಪಿಸುವ ಯಾವುದೇ ಕಾರ್ಯನೀತಿಯನ್ನು ನಾವು ಹೊಂದಿಲ್ಲ. ಮೀಸಲು ಕರೆನ್ಸಿಯಾಗಿ ಡಾಲರ್ ಅಂತರಾಷ್ಟ್ರೀಯ ಆರ್ಥಿಕ ಸ್ಥಿರತೆಯ ಮೂಲವಾಗಿದೆ ಮತ್ತು ಇದೀಗ ನಮಗೆ ಬೇಕಿರುವುದು ಜಗತ್ತಿನಲ್ಲಿ ಹೆಚ್ಚು ಆರ್ಥಿಕ ಸ್ಥಿರತೆ, ಕಡಿಮೆ ಸ್ಥಿರತೆಯಲ್ಲ ಎಂದವರು ಹೇಳಿದ್ದಾರೆ.
ಹೆಚ್ಚಿನ ಭಾರತೀಯರು ವಿದೇಶಕ್ಕೆ ಪ್ರಯಾಣಿಸುತ್ತಿದ್ದಾರೆ ಮತ್ತು ವಾಸಿಸುತ್ತಿದ್ದಾರೆ. ಭಾರತದ ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರಗಳು ವಿಸ್ತರಿಸಿವೆ. ಪರಿಣಾಮವಾಗಿ ರೂಪಾಯಿ ಬಳಕೆಯೂ ಬೆಳೆಯುತ್ತದೆ. ನಾವು ಭಾರತವನ್ನು ಸಕ್ರಿಯವಾಗಿ ಜಾಗತೀಕರಣಗೊಳಿಸುತ್ತಿರುವುದರಿಂದ ನಾವು ರೂಪಾಯಿಯ ಅಂತರಾಷ್ಟ್ರೀಕರಣವನ್ನು ಸ್ಪಷ್ಟವಾಗಿ ಉತ್ತೇಜಿಸುತ್ತಿದ್ದೇವೆ' ಎಂದು ಜೈಶಂಕರ್ ಹೇಳಿದ್ದಾರೆ.