×
Ad

ಭಾರತ-ಅಮೆರಿಕ ರಕ್ಷಣಾ ಸಹಭಾಗಿತ್ವ ಅತ್ಯಂತ ಪರಿಣಾಮಕಾರಿ: ವಿದೇಶಾಂಗ ಸಚಿವ ಎಸ್.ಜೈಶಂಕರ್ ಪ್ರತಿಪಾದನೆ

Update: 2025-07-02 20:34 IST

Photo: X/@DrSJaishankar

ವಾಷಿಂಗ್ಟನ್: ಭಾರತ-ಅಮೆರಿಕ ರಕ್ಷಣಾ ಸಂಬಂಧಗಳ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಎತ್ತಿತೋರಿಸಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್, ಇವು ದ್ವಿಪಕ್ಷೀಯ ಸಂಬಂಧದ ಅತ್ಯಂತ ಪರಿಣಾಮಕಾರಿ ಸ್ಥಂಭಗಳಲ್ಲಿ ಒಂದಾಗಿದೆ ಎಂದಿದ್ದಾರೆ.

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆಥ್‍ ರನ್ನು ವಾಷಿಂಗ್ಟನ್‌ ನಲ್ಲಿ ಭೇಟಿಯಾದ ಜೈಶಂಕರ್ `ರಕ್ಷಣಾ ಸಹಭಾಗಿತ್ವ, ಹಿತಾಸಕ್ತಿಗಳು, ಸಾಮರ್ಥ್ಯ ಮತ್ತು ಜವಾಬ್ದಾರಿಗಳನ್ನು ಮುನ್ನಡೆಸುವ ವಿಷಯದಲ್ಲಿ `ಉತ್ಪಾದಕ' ಮಾತುಕತೆ ನಡೆಸಿದರು. ಪೆಂಟಗಾನ್‌ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜೈಶಂಕರ್ `ಎರಡೂ ದೇಶಗಳ ನಡುವಿನ ರಕ್ಷಣಾ ಸಹಭಾಗಿತ್ವ ನಿಜಕ್ಕೂ ಅತ್ಯಂತ ಪರಿಣಾಮಕಾರಿಯಾಗಿದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.

ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ರಕ್ಷಣಾ ಸಹಭಾಗಿತ್ವದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಹೆಗ್ಸೆಥ್ ಅಮೆರಿಕದ ರಕ್ಷಣಾ ವ್ಯವಸ್ಥೆಗಳನ್ನು ಭಾರತದ ಸಶಸ್ತ್ರ ಪಡೆಗಳಲ್ಲಿ ಸಂಯೋಜನೆಗೊಳಿಸಿರುವುದನ್ನು ಒತ್ತಿಹೇಳಿದರು. ಕೈಗಾರಿಕಾ ಸಹಕಾರ ಮತ್ತು ಸಹ- ಉತ್ಪಾದನಾ ಜಾಲಗಳನ್ನು ವಿಸ್ತರಿಸುವ ಗುರಿಯನ್ನು ವಿವರಿಸಿದರು. ಅಮೆರಿಕದ ಹಲವಾರು ರಕ್ಷಣಾ ಸಾಮಾಗ್ರಿಗಳನ್ನು ಯಶಸ್ವಿಯಾಗಿ ಸಂಯೋಜನೆಗೊಳಿಸಲಾಗಿದೆ. ಈ ಪ್ರಗತಿಯನ್ನು ಆಧರಿಸಿ, ನಾವು ಭಾರತಕ್ಕೆ ಬಾಕಿ ಇರುವ ಹಲವಾರು ಪ್ರಮುಖ ರಕ್ಷಣಾ ಮಾರಾಟವನ್ನು ಪೂರ್ಣಗೊಳಿಸಬಹುದು. ನಮ್ಮ ಹಂಚಿಕೆಯ ರಕ್ಷಣಾ ಕೈಗಾರಿಕಾ ಸಹಕಾರ ಮತ್ತು ಸಹ ನಿರ್ಮಾಣ ಜಾಲಗಳನ್ನು ವಿಸ್ತರಿಸಬಹುದು, ಪರಸ್ಪರ ಕಾರ್ಯಸಾಧ್ಯತೆಯನ್ನು ಬಲಪಡಿಸಬಹುದು ಮತ್ತು ಅಮೆರಿಕ-ಭಾರತ ಪ್ರಮುಖ ರಕ್ಷಣಾ ಸಹಭಾಗಿತ್ವದ ಹೊಸ ಚೌಕಟ್ಟನ್ನು ಔಪಚಾರಿಕವಾಗಿ ಸಹಿ ಹಾಕಬಹುದು' ಎಂದು ಹೆಗ್ಸೆಥ್ ಹೇಳಿದ್ದಾರೆ.

ಈ ವರ್ಷದ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿ ಸಂದರ್ಭದಲ್ಲಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ `ಅಮೆರಿಕ-ಭಾರತ ಪ್ರಮುಖ ರಕ್ಷಣಾ ಸಹಭಾಗಿತ್ವಕ್ಕಾಗಿ ಹತ್ತು ವರ್ಷಗಳ ಚೌಕಟ್ಟಿಗೆ ಸಹಿ ಹಾಕುವ ಯೋಜನೆಯನ್ನು' ಘೋಷಿಸಿದ್ದರು.

ಮಂಗಳವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊರನ್ನು ಜೈಶಂಕರ್ ಭೇಟಿಯಾಗಿದ್ದು ಈ ಸಂದರ್ಭ ದ್ವಿಪಕ್ಷೀಯ ಸಹಭಾಗಿತ್ವ ಮತ್ತು ಪ್ರಾದೇಶಿಕ ಹಾಗೂ ಜಾಗತಿಕ ಬೆಳವಣಿಗೆಯ ಬಗ್ಗೆ ಹಂಚಿಕೊಂಡ ದೃಷ್ಟಿಕೋನಗಳನ್ನು ಚರ್ಚಿಸಿದರು. ಬಳಿಕ ಅಮೆರಿಕದ ವಿದೇಶಾಂಗ ಕಚೇರಿಯಲ್ಲಿ ನಡೆದ ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಜೈಶಂಕರ್, ಮಾರ್ಕೊ ರೂಬಿಯೊ, ಜಪಾನಿನ ವಿದೇಶಾಂಗ ಸಚಿವ ತಕೆಷಿ ಇವಾಯ, ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವೋಂಗ್ ಪಾಲ್ಗೊಂಡರು. ಭಯೋತ್ಪಾದನಾ ನಿಗ್ರಹ ಪ್ರಯತ್ನಗಳು ಸೇರಿದಂತೆ ವ್ಯಾಪಕವಾದ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News