ಇರಾನ್‌ನ ಪರಮಾಣು ನೆಲೆಗಳನ್ನು ನಾಶ ಮಾಡಲಾಗಿದೆ ಎಂದ ಟ್ರಂಪ್; ಕನಸು ಕಾಣುತ್ತಾ ಇರಿ: ಸರ್ವೋಚ್ಚ ನಾಯಕ ಖಾಮಿನೈ ತಿರುಗೇಟು
ಅಯತೊಲ್ಲಾ ಅಲಿ ಖಾಮಿನೈ |Photo Credit : PTI
ಟೆಹ್ರಾನ್, ಅ. 20: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇರಾನ್‌ನ ಪರಮಾಣು ನೆಲೆಗಳನ್ನು ನಾಶಮಾಡಲಾಗಿದೆ ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಾಮಿನೈ, ಕನಸು ಕಾಣುತ್ತಲೇ ಇರಿ ಎಂದು ಛೇಡಿಸಿದ್ದಾರೆ.
ಸೋಮವಾರ ತಮ್ಮ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಖಾಮಿನೈ, “ಕನಸು ಕಾಣುತ್ತಲೇ ಇರಿ” ಎಂದು ಟ್ರಂಪ್ ಅವರ ಹೇಳಿಕೆಯನ್ನು ನಿರಾಕರಿಸಿದ್ದಾರೆ. “ಒಂದು ದೇಶವು ಪರಮಾಣು ಉದ್ಯಮವನ್ನು ಹೊಂದಿದ್ದರೆ ಏನು ಮಾಡಬೇಕು ಅಥವಾ ಏನು ಮಾಡಬಾರದು ಎಂದು ಅಮೆರಿಕ ಅಧ್ಯಕ್ಷರು ಹೇಳಬಹುದೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಜೂನ್ ಮಧ್ಯದಲ್ಲಿ, ಇಸ್ರೇಲ್ ಇರಾನ್ ನ ಮೇಲೆ ಬಾಂಬ್ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಅಮೆರಿಕವು ಇಸ್ರೇಲ್ ಗೆ ಬೆಂಬಲ ಸೂಚಿಸಿತ್ತು. ಅಮೆರಿಕವೂ ಇರಾನ್ ಮೇಲೆ ವಾಯುದಾಳಿ ನಡೆಸಿತ್ತು.
“ನಾವು ಇರಾನ್‌ನ ಪ್ರಮುಖ ಪರಮಾಣು ನೆಲೆಗಳ ಮೇಲೆ 14 ಬಾಂಬ್‌ಗಳನ್ನು ಹಾಕಿದ್ದೇವೆ. ಅವು ಸಂಪೂರ್ಣವಾಗಿ ನಾಶಗೊಂಡಿವೆ. ಇದು ಅತ್ಯಂತ ನಿಖರ ಮಿಲಿಟರಿ ಕಾರ್ಯಾಚರಣೆ” ಎಂದು ಟ್ರಂಪ್ ದಾಳಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು.
ಜೂನ್ ನಲ್ಲಿ ಇಸ್ರೇಲ್ ದಾಳಿಯ ಪರಿಣಾಮವಾಗಿ ಏಪ್ರಿಲ್‌ನಲ್ಲಿ ಪ್ರಾರಂಭವಾದ ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವಿನ ಆರನೇ ಸುತ್ತಿನ ಪರಮಾಣು ಮಾತುಕತೆಗಳು ಸ್ಥಗಿತಗೊಂಡಿವೆ.