ಅಮೆರಿಕ ಜೊತೆಗಿನ ಮಾತುಕತೆಯಲ್ಲಿ ಫಲಿತಾಂಶ ಸಿಗುವ ಸಾಧ್ಯತೆಯಿಲ್ಲ: ಖಾಮಿನೈ
ಅಯಾತೊಲ್ಲಾ ಅಲಿ ಖಾಮಿನೈ | PC : PTI
ಟೆಹರಾನ್: ಅಮೆರಿಕದ ಜೊತೆಗಿನ ಪರಮಾಣು ಮಾತುಕತೆಗಳು ಯಾವುದೇ ಫಲಿತಾಂಶವನ್ನು ನೀಡುವ ಸಾಧ್ಯತೆ ತೀರಾ ಕಡಿಮೆ ಎಂದು ಇರಾನ್ ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಾಮಿನೈ ಅವರು ಮಂಗಳವಾರ ತಿಳಿಸಿದ್ದಾರೆ.
ಇರಾನ್ ಯುರೇನಿಯಂ ಸಂವರ್ಧನೆ ಚಟುವಟಿಕೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿರುವ ನಡುವೆಯೇ ಖಾಮಿನೈ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟೆಹರಾನ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ‘‘ ಅಮೆರಿಕ ಜೊತೆ ನಡೆಸುತ್ತಿರುವ ಅಣುಶಕ್ತಿ ಮಾತುಕತೆಯಲ್ಲಿ ಯಾವುದೇ ಫಲಿತಾಂಶ ದೊರೆಯುವುದೆಂದು ನಾನು ಭಾವಿಸುವುದಿಲ್ಲ. ಮಾತುಕತೆಯಲ್ಲಿ ಏನಾಗಲಿದೆಯೆಂಬುದು ಕೂಡಾ ನನಗೆ ತಿಳಿದಿಲ್ಲ’’ ಎಂದು ಹೇಳಿದ್ದಾರೆ.
ಯುರೇನಿಯಂನ್ನು ಸಂವರ್ಧನೆಗೊಳಿಸುವ ಇರಾನ್‌ನ ಹಕ್ಕನ್ನು ನಿರಾಕರಿಸುವುದು ಅತಿ ದೊಡ್ಡ ಪ್ರಮಾದವೆಂದು ಅವರು ಹೇಳಿದ್ದಾರೆ.
ಓಮನ್ ದೇಶದ ಮಧ್ಯಸ್ಥಿಕೆಯೊಂದಿಗೆ ಇರಾನ್ ಹಾಗೂ ಅಮೆರಿಕವು ನಾಲ್ಕು ಸುತ್ತಿನ ಮಾತುಕತೆಗಳನ್ನು ನಡೆಸಿವೆ. 2015ರ ಅಣುಶಕ್ತಿ ಒಪ್ಪಂದವನ್ನು ವಾಶಿಂಗ್ಟನ್ ಕೈಬಿಟ್ಟ ಆನಂತರ ಈ ಎರಡು ರಾಷ್ಟ್ರಗಳ ನಡುವೆ ನಡೆಯುತ್ತಿರುವ ಮೊದಲ ಮಾತುಕತೆ ಇದಾಗಿದೆ.
ಇರಾನ್ ಪ್ರಸಕ್ತ ಶೇ.60ರಷ್ಟು ಯುರೇನಿಯಂನ್ನು ಸಂವರ್ಧನೆಗೊಳಿಸಿದೆ. ಇದು 2015ರಲ್ಲಿ ನಿಗದಿಪಡಿಸಲಾದ ಶೇ.3.7ರ ಮಿತಿಗಿಂತ ತುಂಬಾ ಅಧಿಕವಾಗಿದೆ. ಆದಾಗ್ಯೂ ಅಣ್ವಸ್ತ್ರ ಸಿಡಿತಲೆಯ ಉತ್ಪಾದನೆಗೆ ಇನ್ನೂ ಶೇ.90ರಷ್ಟು ಯುರೇನಿಯಂ ಸಂವರ್ಧನೆಯ ಅಗತ್ಯವಿರುತ್ತದೆ.
ಅಣ್ವಸ್ತ್ರಗಳನ್ನು ಸಂಪಾದಿಸಲು ಇರಾನ್ ಬಯಸುತ್ತಿದೆಯೆಂದು ಅಮೆರಿಕ ಸೇರಿದಂತೆ ಪಾಶ್ಚಾತ್ಯರಾಷ್ಟ್ರಗಳು ಆಪಾದಿಸುತ್ತಾ ಬಂದಿವೆ. ಆದರೆ ಇರಾನ್, ತಾನು ಶಾಂತಿಯುತ ಉದ್ದೇಶಗಳಿಗಾಗಿ ಅಣುಶಕ್ತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಹೇಳಿಕೊಳ್ಳುತ್ತಾ ಬಂದಿದೆ.