ಕಂಡು ಕೇಳರಿಯದ ಹಾನಿಗೆ ಸಿದ್ಧವಾಗಿರಿ: ಅಮೆರಿಕಕ್ಕೆ ಖಾಮಿನೈ ಎಚ್ಚರಿಕೆ
ಖಾಮಿನೈ | PC : X \ @khamenei_ir
ಟೆಹ್ರಾನ್: ಇರಾನ್ ನ ಮೂರು ಪರಮಾಣು ವ್ಯವಸ್ಥೆಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದ ಬಳಿಕ ಅಮೆರಿಕಕ್ಕೆ ಕಠಿಣ ಎಚ್ಚರಿಕೆ ನೀಡಿರುವ ಇರಾನ್ ನ ಸರ್ವೋಚ್ಛ ನಾಯಕ ಅಯತೊಲ್ಲಾ ಆಲಿ ಖಾಮಿನೈ `ಅಮೆರಿಕನ್ನರು ಈ ಹಿಂದೆಂದೂ ಕಂಡು ಕೇಳರಿಯದ ಹಾನಿ ಮತ್ತು ಹೊಡೆತಗಳನ್ನು ನಿರೀಕ್ಷಿಸಬೇಕು' ಎಂದು ಹೇಳಿದ್ದಾರೆ.
ಈ ಹೇಳಿಕೆಯು ಸಂಘರ್ಷದ ಸಂಭಾವ್ಯ ಉಲ್ಬಣವನ್ನು ಸೂಚಿಸುತ್ತದೆ ಮತ್ತು `ಯುದ್ಧದ ಅಪ್ರಚೋದಿತ ಕ್ರಿಯೆಗೆ' ಬಲವಾಗಿ ಪ್ರತಿಕ್ರಿಯಿಸುವ ಇರಾನ್ ನ ಉದ್ದೇಶವನ್ನು ಒತ್ತಿಹೇಳಿದೆ.
ಖಾಮಿನೈ ನಿಲುವನ್ನು ಪ್ರತಿಧ್ವನಿಸಿದ ಅವರ ಪ್ರತಿನಿಧಿ ಹೊಸೈನ್ ಶರಿಯತ್ ಮಾಡಾರಿ ತಕ್ಷಣ ಪ್ರತೀಕಾರ ಕ್ರಮಕ್ಕೆ ಒತ್ತಾಯಿಸಿದ್ದಾರೆ. `ಈಗ ವಿಳಂಬವಿಲ್ಲದೆ ಪ್ರತಿಕ್ರಮ ಕೈಗೊಳ್ಳುವ ಸರದಿ ನಮ್ಮದಾಗಿದೆ. ಪ್ರಥಮ ಹಂತವಾಗಿ, ಬಹ್ರೇನ್ ನಲ್ಲಿರುವ ಅಮೆರಿಕದ ನೌಕಾಪಡೆಯ ಮೇಲೆ ಕ್ಷಿಪಣಿ ದಾಳಿ ನಡೆಸಬೇಕು. ಅದೇ ಸಮಯದಲ್ಲಿ ಅಮೆರಿಕ, ಬ್ರಿಟನ್, ಜರ್ಮನ್ ಮತ್ತು ಫ್ರಾನ್ಸ್ ನ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಬೇಕು' ಎಂದವರು ಆಗ್ರಹಿಸಿದ್ದಾರೆ.
ಅಮೆರಿಕದ ವಿರುದ್ಧ ಇರಾನಿನ ಯಾವುದೇ ಪ್ರತೀಕಾರ ಕ್ರಮವನ್ನು ಸಂಪೂರ್ಣ ಬಲ ಬಳಸಿ ಎದುರಿಸಲಾಗುವುದು. ಜೊತೆಗೆ, ಇನ್ನಷ್ಟು ಪ್ರಬಲ ದಾಳಿ ನಡೆಸಲಾಗುವುದು ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
ಪ್ರಮುಖ ಪರಮಾಣು ವ್ಯವಸ್ಥೆಯ ಮೇಲಿನ ಅಮೆರಿಕದ ದಾಳಿಯ ಹಿನ್ನೆಲೆಯಲ್ಲಿ, ನಿವಾಸಿಗಳಿಗೆ ಯಾವುದೇ ಅಪಾಯವಿಲ್ಲ. ದಾಳಿ ತೀವ್ರವಾಗಿದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಇರಾನಿನ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ. ಅಮೆರಿಕದ ದಾಳಿಯ ಹೊರತಾಗಿಯೂ, ದೇಶವು ತನ್ನ ಪರಮಾಣು ಚಟುವಟಿಕೆಗಳನ್ನು ಮುಂದುವರಿಸಲಿದೆ ಎಂದು ಇರಾನಿನ ಪರಮಾಣು ಇಂಧನ ಸಂಸ್ಥೆ ಹೇಳಿದೆ.