×
Ad

ಇಂಧನ ಕೊರತೆ | ಮಧ್ಯಗಾಝಾದ ಅತ್ಯಂತ ದೊಡ್ಡ ಆಸ್ಪತ್ರೆ ಮುಚ್ಚುವ ಹಂತದಲ್ಲಿ

Update: 2024-05-24 21:41 IST

ಸಾಂದರ್ಭಿಕ ಚಿತ್ರ PC : NDTV

ಗಾಝಾ : ಗಾಝಾದ ಕೇಂದ್ರ ಭಾಗದಲ್ಲಿರುವ ದೀರ್ ಅಲ್-ಬಲಾಹ್‌ನಲ್ಲಿಯ ಅಲ್-ಅಕ್ಸಾ ಮಾರ್ಟಿಯರ್ಸ್ ಹಾಸ್ಪಿಟಲ್ ಇಂಧನ ಕೊರತೆಯಿಂದಾಗಿ ಎರಡು ಗಂಟೆಗಳಲ್ಲಿ ತನ್ನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಬಹುದು ಎಂದು ಆರೋಗ್ಯ ಸಚಿವಾಲಯವು ಗುರುವಾರ ಅಪರಾಹ್ನ ತಿಳಿಸಿದ್ದು,ರಾತ್ರಿಯ ನಂತರದ ಅಸೋಸಿಯೇಟೆಡ್ ಪ್ರೆಸ್‌ನ ವೀಡಿಯೊ ತುಣುಕಿನಲ್ಲಿ ಆಸ್ಪತ್ರೆಯು ಗಾಢಾಂಧಕಾರದಲ್ಲಿ ಇರುವಂತೆ ಕಂಡು ಬಂದಿದೆ. ಆದರೆ ಆಸ್ಪತ್ರೆಯನ್ನು ಮುಚ್ಚಲಾಗಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

ಆಸ್ಪತ್ರೆಯಲ್ಲಿ ಪ್ರಸ್ತುತ 600ಕ್ಕೂ ಅಧಿಕ ರೋಗಿಗಳು ಮತ್ತು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ಇತರ ಸುಮಾರು 650 ಮೂತ್ರಪಿಂಡ ರೋಗಿಗಳು ಡಯಲಿಸಿಸ್‌ಗಾಗಿ ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ ಎಂದು ತಿಳಿಸಿರುವ ಸಚಿವಾಲಯವು,ಆಸ್ಪತ್ರೆಯನ್ನು ಮುಚ್ಚಿದರೆ ಅವರ ಜೀವ್‌ಗಳು ಅಪಾಯದಲ್ಲಿ ಸಿಲುಕಲಿವೆ ಎಂದು ಎಚ್ಚರಿಕೆಯನ್ನು ನೀಡಿದೆ.

ರಫಾದಿಂದ ಪಲಾಯನಗೈಯುತ್ತಿರುವ ಫೆಲೆಸ್ತೀನಿಗಳಿಂದ ದೀರ್ ಅಲ್-ಬಲಾಹ್ ಪಟ್ಟಣವು ತುಂಬಿಹೋಗಿದ್ದು,ಅಲ್-ಅಕ್ಸಾ ಮಾರ್ಟಿಯರ್ಸ್ ಹಾಸ್ಪಿಟಲ್ ಮುಚ್ಚಲ್ಪಟ್ಟರೆ ರೋಗಿಗಳಿಗಾಗಿ ಕೇವಲ ಎರಡು ಆಸ್ಪತ್ರೆಗಳು ಲಭ್ಯವಿರುತ್ತವೆ. ಗಾಝಾದಾದ್ಯಂತ ಇರುವ 36 ಮೂಲ ಆಸ್ಪತ್ರೆಗಳ ಪೈಕಿ ಕೇವಲ ಮೂರನೇ ಒಂದರಷ್ಟು ಆಸ್ಪತ್ರೆಗಳು ಈಗಲೂ ಕಾರ್ಯ ನಿರ್ವಹಿಸುತ್ತಿವೆ,ಅದೂ ಭಾಗಶಃ.

ಆಸ್ಪತ್ರೆಯು ಬುಧವಾರ 3,000 ಲೀ.ಇಂಧನವನ್ನು ಸ್ವೀಕರಿಸಿದೆ. ಆದರೆ ಅದು ಕಾರ್ಯ ನಿರ್ವಹಿಸಲು ದಿನವೊಂದಕ್ಕೆ 5,000 ಲೀ.ಅಗತ್ಯವಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.

ಮೇ 6ರಂದು ಗಾಝಾಕ್ಕೆ ಇಂಧನದ ಮುಖ್ಯ ಪ್ರವೇಶ ತಾಣವಾಗಿರುವ ರಫಾ ಗಡಿದಾಟನ್ನು ಇಸ್ರೇಲ್ ಪಡೆಗಳು ವಶಪಡಿಸಿಕೊಂಡಿವೆ.

ಆಸ್ಪತ್ರೆಗಳು ಮತ್ತು ಇತರ ಕಾರ್ಯಾಚರಣೆಗಳನ್ನು ನಡೆಸಲು ವಿಶ್ವಸಂಸ್ಥೆಗೆ ದಿನಕ್ಕೆ ಎರಡು ಲಕ್ಷ ಲೀಟರ್ ಇಂಧನದ ಅಗತ್ಯವಿದೆ. ಆದರೆ ಫೆಲೆಸ್ತೀನಿ ನಿರಾಶ್ರಿತರಿಗಾಗಿ ಮುಖ್ಯ ವಿಶ್ವಸಂಸ್ಥೆ ಏಜೆನ್ಸಿಯಾಗಿರುವ ಯುಎನ್‌ಆರ್‌ಡಬ್ಲ್ಯುಎ ಮುಖ್ಯಸ್ಥ ಫಿಲಿಪ್ ಲಝ್ಝಾರಿನಿ ಅವರು,ಮೇ 6ರಿಂದ ಗಾಝಾಕ್ಕೆ ಇಂಧನ ಪೂರೈಕೆಯು ತೀವ್ರವಾಗಿ ಹಳಿತಪ್ಪಿದೆ. ರವಿವಾರ 70,000 ಲೀ. ಮತ್ತು ಮಂಗಳವಾರ 1,00,000 ಲೀ.ಇಂಧನ ಬಂದಿದೆ ಎಂದು ತಿಳಿಸಿದರು.

ಇಸ್ರೇಲ್ ವಶಪಡಿಸಿಕೊಂಡಾಗಿನಿಂದ ರಫಾ ಗಡಿದಾಟನ್ನು ಮುಚ್ಚಲಾಗಿದೆ. ನೆರವು ಟ್ರಕ್‌ಗಳ ಪ್ರವೇಶ ಕುರಿತು ತನ್ನೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಇಸ್ರೇಲ್ ಈಜಿಪ್ಟ್‌ನ್ನು ಕೇಳಿಕೊಂಡಿದೆ. ರಫಾ ಗಡಿದಾಟು ಶಾಶ್ವತವಾಗಿ ಇಸ್ರೇಲ್ ವಶವಾಗಬಹುದು ಎಂದು ಆತಂಕಗೊಂಡಿರುವ ಈಜಿಪ್ಟ್ ಇದಕ್ಕೆ ನಿರಾಕರಿಸಿದೆ. ಗಡಿದಾಟನ್ನು ನಿರ್ವಹಿಸಲು ಫೆಲೆಸ್ತೀನಿಗಳಿಗೆ ಅವಕಾಶ ನೀಡಬೇಕು ಎಂದು ಅದು ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News