ಭಾರತೀಯ ಐಟಿ ಕಂಪೆನಿಗಳ ‘ಹೊರಗುತ್ತಿಗೆ’ಗೆ ಟ್ರಂಪ್ ನಿರ್ಬಂಧ ಸಾಧ್ಯತೆ?
ಅಮೆರಿಕದ ಬಲಪಂಥೀಯ ನಾಯಕಿ ಲಾರಾ ಲೂಮರ್ ಸುಳಿವು
PC - X
ವಾಶಿಂಗ್ಟನ್,ಸೆ.7: ಭಾರತ ಹಾಗೂ ಅಮೆರಿಕ ನಡುವೆ ಸುಂಕ ಬಿಕ್ಕಟ್ಟು ಮುಂದುವರಿದಿರುವಂತೆಯೇ, ಅಮೆರಿಕನ್ ಕಂಪೆನಿಗಳು ತಮ್ಮ ಕೆಲಸಗಳನ್ನು ಭಾರತದ ಮಾಹಿತಿತಂತ್ರಜ್ಞಾನ (ಐಟಿ) ಸಂಸ್ಥೆಗಳಿಗೆ ಹೊರಗುತ್ತಿಗೆ ನೀಡುವುದನ್ನು ತಡೆಯುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಿಶೀಲಿಸುತ್ತಿದ್ದಾರೆಂದು ಅಮೆರಿಕದ ಬಲಪಂಥೀಯ ನಾಯಕಿ ಲಾರಾ ಲೂಮರ್ ಹೇಳಿದ್ದಾರೆ.
ಟ್ರಂಪ್ ಅವರು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಲ್ಲಿ ಅಮೆರಿಕನ್ನರು ಗ್ರಾಹಕ ನೆರವನ್ನು (ಕಸ್ಟಮರ್ ಸಪೋರ್ಟ್) ಪಡೆಯಲು ಇಂಗ್ಲೀಷ್ ನಲ್ಲಿ ಮಾತನಾಡಲು ದೂರವಾಣಿಯಲ್ಲಿ 2 ಸಂಖ್ಯೆಯನ್ನು ಒತ್ತಬೇಕಾಗಿ ಬರುವುದಿಲ್ಲವೆಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಡಿದ ಪೋಸ್ಟ್ ನಲ್ಲಿ ವ್ಯಂಗ್ಯವಾಡಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಟ್ರಂಪ್ ಅವರ ಜನಪ್ರಿಯ ‘ ಮೇಕ್ ಅಮೆರಿಕ ಗ್ರೇಟ್ ಎಗೇನ್ ’ ಘೋಷಣೆಯನ್ನು ಅನುಕರಿಸಿರುವ ಲಾರಾ ಅವರು ‘ಮೇಕ್ ಕಾಲ್ಸೆಂಟರ್ಸ್ ಗ್ರೇಟ್ ಎಗೇನ್’ (ಕಾಲ್ಸೆಂಟರ್ಗಳನ್ನು ಮತ್ತೆ ಅಮೆರಿಕನ್ ಆಗಿ ಮಾಡಿರಿ) ಎಂದು ಕರೆ ನೀಡಿದ್ದಾರೆ.
ಲಾರಾ ಅವರು ಶನಿವಾರ ಎಕ್ಸ್‌ನಲ್ಲಿ ಪ್ರಕಟಿಸಿದ ಇನ್ನೊಂದು ಪೋಸ್ಟ್ನಲ್ಲಿ ಈ ವಿಷಯವನ್ನೇ ಮುಂದುವರಿಸಿದ್ದು, ಅಮೆರಿಕನ್ ಗ್ರಾಹಕರು ಇಂಗ್ಲೀಷ್ ಮಾತನಾಡದ ಇನ್ನೋರ್ವ ವ್ಯಕ್ತಿಯೊಂದಿಗೆ 2 ಸಂಖ್ಯೆಯನ್ನು ಒತ್ತುವ ದಿನಗಳನ್ನು ಅಧ್ಯಕ್ಷ ಟ್ರಂಪ್ ಕೊನೆಗೊಳಿಸಲಿರುವುದು ನನಗೆ ಸಂಭ್ರಮವುಂಟು ಮಾಡಿದೆ’ ಎಂದು ಹೇಳಿದ್ದಾರೆ.
ಭಾರತೀಯ ಕಂಪೆನಿಗಳಿಗೆ ಹೊರಗುತ್ತಿಗೆ ನೀಡುವುದನ್ನು ನಿಲ್ಲಿಸಬೇಕೆಂದು ಅಮೆರಿಕದಲ್ಲಿ ಬಲಪಂಥೀಯರು ಆಗ್ರಹಿಸುತ್ತಿರುವಂತೆಯೇ, ಟ್ರಂಪ್ ಭಾರತೀಯ ಐಟಿ ಕಂಪೆನಿಗ ಹೊರಗುತ್ತಿಗೆಗಳಿಗೂ ನಿರ್ಬಂಧಗಳನ್ನು ವಿಧಿಸಲಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಸರಕುಗಳ ರಫ್ತಿಗೆ ನೀಡುವ ಸುಂಕದಂತೆ ಅಮೆರಿಕಕ್ಕೆ ದೂರದಿಂದ ಸೇವೆಗಳನ್ನು ಒದಗಿಸುತ್ತಿರುವುದಕ್ಕಾಗಿಯೂ ದೇಶಗಳು ತೆರಿಗೆಯನ್ನು ಪಾವತಿಸುವಂತೆ ಮಾಡಬೇಕಿದೆ ಎಂದು ಬಲಪಂಥೀಯ ಚಿಂತಕ ಜಾಕ್ ಪೋಸೊ ತಿಳಿಸಿದ್ದಾರೆ.