×
Ad

ಕಾನೂನು ಜಾರಿ ಕಾರ್ಯಾಚರಣೆ, ಯುದ್ದವಲ್ಲ: Venezuela ಕಾರ್ಯಾಚರಣೆಗೆ ವಿಶ್ವಸಂಸ್ಥೆಯಲ್ಲಿ ಅಮೆರಿಕ ಸಮರ್ಥನೆ

ಮಡುರೊರನ್ನು ಅಮೆರಿಕ ಅಪಹರಿಸಿದೆ: ವೆನೆಝುವೆಲಾ ಆರೋಪ

Update: 2026-01-06 21:30 IST

Photo Credit ; AP \ PTI 

ವಿಶ್ವಸಂಸ್ಥೆ, ಜ.6: ವೆನೆಝುವೆಲಾ ಅಧ್ಯಕ್ಷ ನಿಕೊಲಸ್ ಮಡುರೊರನ್ನು ವಶಪಡಿಸಿಕೊಳ್ಳಲು ಕಾರಣವಾದ ಅಮೆರಿಕದ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಸೋಮವಾರ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಅಮೆರಿಕ ಮತ್ತು ವೆನೆಝುವೆಲಾ ಪರಸ್ಪರ ಆರೋಪ ವಿನಿಮಯ ಮಾಡಿಕೊಂಡಿವೆ.

ಮಡುರೊ ಓರ್ವ ನಾರ್ಕೊ-ಟೆರರಿಸ್ಟ್ (ಮಾದಕ ವಸ್ತು ಕಳ್ಳಸಾಗಣೆಯಿಂದ ಬರುವ ಲಾಭದ ಹಣವನ್ನು ಭಯೋತ್ಪಾದನೆಗೆ ಒದಗಿಸುವುದು) ಎಂದು ಅಮೆರಿಕ ಆರೋಪಿಸಿದರೆ, ಅಮೆರಿಕವು ಅಧ್ಯಕ್ಷ ಮಡುರೊರನ್ನು ಅಪಹರಿಸಿರುವುದಾಗಿ ವೆನೆಝುವೆಲಾ ಪ್ರತ್ಯಾರೋಪ ಮಾಡಿದೆ. ತನ್ನ ಕಾರ್ಯಾಚರಣೆ ಮಿಲಿಟರಿ ಆಕ್ರಮಣಶೀಲತೆ ಅಲ್ಲ. ಉದ್ದೇಶಿತ ಕಾನೂನು ಜಾರಿ ಕ್ರಮವಾಗಿದೆ. ದೋಷಾರೋಪಣೆಗೊಳಗಾಗಿ ತಲೆಮರೆಸಿಕೊಂಡವರನ್ನು ಬಂಧಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಪ್ರತಿಪಾದಿಸಿದೆ.

ತಮ್ಮ ದೇಶವು ಸಶಸ್ತ್ರ ದಾಳಿಗೆ ಗುರಿಯಾಗಿದೆ. ಬಾಂಬ್ ದಾಳಿಯಿಂದ ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿದೆ. ಜೊತೆಗೆ ಅಧ್ಯಕ್ಷರು ಮತ್ತು ಅವರ ಪತ್ನಿಯನ್ನು ಅಕ್ರಮವಾಗಿ ಬಂಧಿಸಲಾಗಿದೆ. ಈ ಕಾರ್ಯಾಚರಣೆಯು ವಿಶ್ವಸಂಸ್ಥೆಯ ಸನದು, ಜಿನೆವಾ ನಿರ್ಣಯಗಳು ಮತ್ತು ರಾಷ್ಟ್ರದ ಮುಖ್ಯಸ್ಥರಿಗೆ ವಿನಾಯತಿಯ ತತ್ವಗಳನ್ನು ಉಲ್ಲಂಘಿಸಿದ್ದು ಇಂತಹ ಕೃತ್ಯಗಳು ಎಲ್ಲಾ ದೇಶಗಳಿಗೂ ಅಪಾಯಕಾರಿ ಪೂರ್ವನಿದರ್ಶನವನ್ನು ಹಾಕಿಕೊಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಅಮೆರಿಕದ ಕ್ರಮಗಳನ್ನು ಸಮರ್ಥಿಸಿಕೊಂಡ ಅಮೆರಿಕದ ಪ್ರತಿನಿಧಿ ಮೈಕ್ ವಾಲ್ಟ್ಸ್ `ಮಡುರೊ ನಾರ್ಕೊ- ಭಯೋತ್ಪಾದನೆಯ ಜಾಲವನ್ನು ನಡೆಸುತ್ತಿದ್ದು ಇದು ನೂರಾರು ಟನ್‍ಗಳಷ್ಟು ಮಾದಕ ವಸ್ತುಗಳನ್ನು ಅಮೆರಿಕದೊಳಗೆ ಸಾಗಿಸುತ್ತದೆ ಮತ್ತು ಹಿಜ್ಬುಲ್ಲಾದಂತಹ ಗುಂಪುಗಳೊಂದಿಗೆ ಸಂಪರ್ಕವನ್ನು ಹೊಂದಿದೆ. ವೆನೆಝುವೆಲಾ ಕ್ರಿಮಿನಲ್ ಮತ್ತು ಪ್ರತಿಕೂಲ ಗುಂಪುಗಳಿಗೆ ನೆಲೆಯೊದಗಿಸಿದ್ದು ಈ ವಲಯಾದ್ಯಂತ ಅಸ್ಥಿರತೆ ಮತ್ತು ಸಾಮೂಹಿಕ ವಲಸೆಗೆ ಉತ್ತೇಜನ ನೀಡುತ್ತಿದೆ ' ಎಂದು ಆರೋಪಿಸಿದರು. ಅಮೆರಿಕದ ಕಾರ್ಯಾಚರಣೆ ಅಪಾಯಕಾರಿ ಪೂರ್ವನಿದರ್ಶನಕ್ಕೆ ಕಾರಣವಾಗಲಿದೆ ಎಂದು ಪಾಕಿಸ್ತಾನ ಎಚ್ಚರಿಸಿದ್ದು ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಸಂಧಾನ ಮಾತುಕತೆಗೆ ಆಗ್ರಹಿಸಿದೆ. ಬ್ರಿಟನ್, ಡೆನ್ಮಾರ್ಕ್ ಮತ್ತು ಫ್ರಾನ್ಸ್ ಬಲಪ್ರಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದರೆ ಲಾತ್ವಿಯಾ ಮತ್ತು ಅರ್ಜೆಂಟೀನಾಗಳು ಅಮೆರಿಕದ ಪರ ನಿಲುವು ತಳೆದಿವೆ.

►ಅಮೆರಿಕದ ಕ್ರಮಕ್ಕೆ ರಶ್ಯ, ಚೀನಾ ವಿರೋಧ

ಅಮೆರಿಕದ ನಡೆಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಶ್ಯ ಮತ್ತು ಚೀನಾ ಕಟುವಾಗಿ ಟೀಕಿಸಿದೆ. `ಅಮೆರಿಕದ ಕಾರ್ಯಾಚರಣೆಯು ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ ಮತ್ತು ಸ್ವೇಚ್ಛಾಚಾರದ ಯುಗಕ್ಕೆ ಮರಳಿದಂತಾಗಿದೆ' ಎಂದು ವಿಶ್ವಸಂಸ್ಥೆಗೆ ರಶ್ಯದ ಪ್ರತಿನಿಧಿ ವ್ಯಾಸಿಲಿ ನೆಬೆಂಝ್ಯಾ ಪ್ರತಿಪಾದಿಸಿದ್ದು ಮಡುರೊರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.

ಅಮೆರಿಕದ ಬೆದರಿಕೆಯ ವರ್ತನೆಯಿಂದ, ಭದ್ರತಾ ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವ, ಅಂತರಾಷ್ಟ್ರೀಯ ಕಾನೂನಿಗಿಂತ ಮೇಲೆ ತನ್ನ ಅಧಿಕಾರವನ್ನು ಇರಿಸುವ ನಿಲುವಿನಿಂದ ತೀವ್ರ ಆಘಾತಗೊಂಡಿರುವುದಾಗಿ ಚೀನಾ ಹೇಳಿದೆ.

►ಎಲ್ಲಾ ರಾಷ್ಟ್ರಗಳೂ ವಿಶ್ವಸಂಸ್ಥೆ ಸನದಿಗೆ ಬದ್ಧವಾಗಿರಬೇಕು: ಗುಟೆರಸ್

ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯು ವಿಶ್ವಸಂಸ್ಥೆಯ ಚಾರ್ಟರ್(ಸನದು)ಗೆ ಎಲ್ಲಾ ಸದಸ್ಯ ರಾಷ್ಟ್ರಗಳ ಬದ್ಧತೆಯನ್ನು ಅವಲಂಬಿಸಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಚಾರ್ಟರ್, ರಾಷ್ಟ್ರೀಯ ಸಾರ್ವಭೌಮತ್ವ, ರಾಜಕೀಯ ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಸಮಗ್ರತೆಗೆ ಸಂಪೂರ್ಣ ಗೌರವ ಇರಬೇಕು ಎಂದವರು ಹೇಳಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News