ನಮಗೆ ಗ್ರೀನ್‍ಲ್ಯಾಂಡ್ ಬೇಕು: ಟ್ರಂಪ್
Photo Credit : PTI
ವಾಷಿಂಗ್ಟನ್, ಜ. 6: ರಾಷ್ಟ್ರೀಯ ಭದ್ರತೆಯ ಕಾರಣಗಳಿಗಾಗಿ ಅಮೆರಿಕಾಕ್ಕೆ ಗ್ರೀನ್‍ಲ್ಯಾಂಡ್ ಅಗತ್ಯವಿದ್ದು, ಮುಂಬರುವ ವಾರಗಳಲ್ಲಿ ಈ ವಿಷಯವನ್ನು ಮರುಪರಿಶೀಲಿಸಲಾಗುವುದು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
‘‘ಪ್ರಸ್ತುತ ಗ್ರೀನ್‍ಲ್ಯಾಂಡ್ ಸುತ್ತಮುತ್ತ ರಷ್ಯಾ ಮತ್ತು ಚೀನಾದ ಹಡಗುಗಳಿವೆ. ಅತ್ಯಂತ ಆಯಕಟ್ಟಿನ ಪ್ರದೇಶದಲ್ಲಿರುವ ಗ್ರೀನ್‍ಲ್ಯಾಂಡ್ ನಮ್ಮ ರಾಷ್ಟ್ರೀಯ ಭದ್ರತಾ ಪರಿಸ್ಥಿತಿಗೆ ಅಗತ್ಯ. ಆದರೆ ಈ ವಿಷಯದ ಬಗ್ಗೆ ಸುಮಾರು 20 ದಿನಗಳ ನಂತರ ಗಮನ ಹರಿಸೋಣ. ಮೊದಲು ವೆನೆಝುವೆಲಾ, ರಷ್ಯಾ, ಉಕ್ರೇನ್ ಕುರಿತು ಮಾತನಾಡೋಣ’’ ಎಂದು ಟ್ರಂಪ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದಾರೆ.
ಗ್ರೀನ್‍ಲ್ಯಾಂಡ್ ಪ್ರದೇಶವನ್ನು ರಕ್ಷಿಸಲು ಡೆನ್ಮಾರ್ಕ್‌ಗೆ ಸಾಧ್ಯವಾಗದು. ಗ್ರೀನ್‍ಲ್ಯಾಂಡ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಲು ಇತ್ತೀಚೆಗೆ ಡೆನ್ಮಾರ್ಕ್ ಏನು ಮಾಡಿದೆ ಎಂಬುದು ನಿಮಗೆ ಗೊತ್ತೇ? ಆ ಪ್ರದೇಶಕ್ಕೆ ಒಂದು ನಾಯಿ ಗಾಡಿಯನ್ನು (ನಾಯಿಗಳು ಎಳೆಯುವ ಗಾಡಿ) ನಿಯೋಜಿಸಲಾಗಿದೆ. ಅದೊಂದು ದೊಡ್ಡ ನಡೆ ಎಂದು ಅವರು ಭಾವಿಸಿದ್ದಾರೆ ಎಂದು ಟ್ರಂಪ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.