Photo Credit : PTI 

ಕಠ್ಮಂಡು: ಶುಕ್ರವಾರ ಬಿಡುಗಡೆಯಾಗಿರುವ ಪ್ರಾಥಮಿಕ ಸರಕಾರಿ ಮೌಲ್ಯಮಾಪನದ ಪ್ರಕಾರ, ಆಗಸ್ಟ್ 26ರಂದು ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಿಂದಾಗಿ 32,000ಕ್ಕೂ ಹೆಚ್ಚು ಮಂದಿ ಸಂತ್ರಸ್ತರಾಗಿದ್ದಾರೆ. ಈ ಪ್ರವಾಹದಲ್ಲಿ ರಸ್ತೆಗಳು, ಸೇತುವೆಗಳು, ಶಾಲೆಗಳು ಹಾಗೂ ಆರೋಗ್ಯ ಸೇವಾ ಸೌಲಭ್ಯಗಳಿಗೆ ವ್ಯಾಪಕ ಪ್ರಮಾಣದ ಹಾನಿಯಾಗಿದೆ ಎಂದು ಹೇಳಲಾಗಿದೆ.

ಪತ್ರಿಕಾ ವಿವರಣೆಯ ವೇಳೆ ಪ್ರಾಥಮಿಕ ವರದಿಯನ್ನು ಮಂಡಿಸಿದ ರಾಷ್ಟ್ರೀಯ ವಿಪತ್ತು ಅಪಾಯ ತಗ್ಗಿಸುವಿಕೆ ಹಾಗೂ ನಿರ್ವಹಣಾ ಪ್ರಾಧಿಕಾರ, ಹಾನಿಗೀಡಾಗಿರುವ ಸ್ಥಳಗಳಿಂದ ಮತ್ತಷ್ಟು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 1,295ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ.

ಆಗಸ್ಟ್ 26ರಂದು ನೇಪಾಳ-ಟಿಬೆಟ್ ಗಡಿಯಲ್ಲಿ ಹಿಮನದಿಯೊಂದು ಸ್ಫೋಟಗೊಂಡ ಪರಿಣಾಮ, ಉತ್ತರ ಮತ್ತು ಕೇಂದ್ರ ನೇಪಾಳದ ಪಟ್ಟಣ ಮತ್ತು ಗ್ರಾಮಗಳಲ್ಲಿ ವ್ಯಾಪಕ ಪ್ರಮಾಣದ ಹಾನಿ ಸಂಭವಿಸಿದೆ.

ಈ ಪ್ರಾಕೃತಿಕ ವಿಕೋಪದಲ್ಲಿ ಸುಮಾರು 32,933 ಮಂದಿ ಸಂತ್ರಸ್ತರಾಗಿದ್ದಾರೆ ಎಂದು ಪ್ರಾಥಮಿಕ ಮೌಲ್ಯಮಾಪನದಲ್ಲಿ ಅಂದಾಜಿಸಲಾಗಿದೆ. ಶೈಕ್ಷಣಿಕ ಸಂಸ್ಥೆಗಳಿಗೆ ಆಗಿರುವ ಹಾನಿಯಿಂದಾಗಿ 6,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ ಎಂದು ಹೇಳಲಾಗಿದೆ.

ಈ ಪ್ರವಾಹದಲ್ಲಿ ನಾಲ್ಕು ಆರೋಗ್ಯ ಸೇವಾ ಸೌಲಭ್ಯಗಳು ಸಂಪೂರ್ಣವಾಗಿ ನಾಶವಾಗಿದ್ದರೆ, ನಾಲ್ಕು ಆರೋಗ್ಯ ಸೇವಾ ಸೌಲಭ್ಯಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಈ ಪ್ರವಾಹದಿಂದಾಗಿ ಸುಮಾರು 55 ಕಿಮೀ ಉದ್ದನೆಯ ವಾಹನ ಸಂಚಾರ ಯೋಗ್ಯ ರಸ್ತೆ ಸಂಪೂರ್ಣವಾಗಿ ಹಾನಿಗೀಡಾಗಿದೆ. ಅಲ್ಲದೆ, ವಾಹನಗಳು ಸಂಚರಿಸಲು ಯೋಗ್ಯವಾದ 37 ಸೇತುವೆಗಳು ಹಾಗೂ 68 ತೂಗು ಸೇತುವೆಗಳೂ ಹಾನಿಗೀಡಾಗಿವೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರವಾಹದಿಂದಾಗಿ ಆಗಿರುವ ಒಟ್ಟಾರೆ ಹಾನಿಯ ವಿಸ್ತೃತ ಮೌಲ್ಯಮಾಪನವನ್ನು ಸರಕಾರ ಇನ್ನಷ್ಟೇ ಸಂಪೂರ್ಣಗೊಳಿಸಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor