×
Ad

ಲೆಬನಾನ್: ನಿರಾಶ್ರಿತರಿದ್ದ ಕಟ್ಟಡ ಕುಸಿದು 4 ಮಂದಿ ಮೃತ್ಯು

Update: 2024-02-20 21:51 IST

Photo: X/@galpalpheebs

ಬೈರುತ್: ಲೆಬನಾನ್ ರಾಜಧಾನಿ ಬೈರುತ್ನ ದಕ್ಷಿಣ ಉಪನಗರದಲ್ಲಿ ಸೋಮವಾರ ತಡರಾತ್ರಿ ಕಟ್ಟಡವೊಂದು ಕುಸಿದುಬಿದ್ದು 4 ಮಂದಿ ಸಾವನ್ನಪ್ಪಿದ್ದು ಇತರ ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಲೆಬನಾನ್ನಲ್ಲಿ ಕಳೆದ ಕೆಲ ದಿನಗಳಲ್ಲಿ ಭಾರೀ ಮಳೆಯಾಗಿದ್ದು ಚೌಯಿಫತ್ ನಗರದಲ್ಲಿ ಕಟ್ಟಡ ಕುಸಿದಿದೆ. ಕುಸಿದು ಬಿದ್ದ ಕಟ್ಟಡದ ಅವಶೇಷಗಳಡಿ ಇನ್ನಷ್ಟು ಮಂದಿ ಸಿಲುಕಿರುವ ಶಂಕೆಯಿದ್ದು ಶೋಧ ಮತ್ತು ರಕ್ಷಣಾ ಕಾರ್ಯ ಮುಂದುವರಿದಿದೆ. ನಾಲ್ಕು ಮಹಡಿಯ ಈ ಕಟ್ಟಡ ಸುರಕ್ಷಿತವಲ್ಲದ ಕಾರಣ ಅದನ್ನು ತೆರವುಗೊಳಿಸುವಂತೆ 2 ವರ್ಷದ ಹಿಂದೆ ಪುರಸಭೆ ಸೂಚಿಸಿದ್ದರೂ ಕಟ್ಟಡದ ಮಾಲಕ ಅಪಾರ್ಟ್ಮೆಂಟ್ಗಳನ್ನು ಸಿರಿಯಾದ ನಿರಾಶ್ರಿತರಿಗೆ ಬಾಡಿಗೆಗೆ ನೀಡಿದ್ದ. ದುರಂತದಲ್ಲಿ ಮೃತಪಟ್ಟವರೆಲ್ಲರೂ ಸಿರಿಯಾ ನಿರಾಶ್ರಿತರು.

ಮೃತರಲ್ಲಿ ಇಬ್ಬರು ಮಹಿಳೆಯರು ಮತ್ತು ಒಂದು ಮಗು ಸೇರಿದೆ ಎಂದು ಸರಕಾರಿ ಸ್ವಾಮ್ಯದ ನ್ಯಾಷನಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಇಬ್ಬರು ಮಹಿಳೆಯರು ಮತ್ತು ಓರ್ವ ಬಾಲಕನನ್ನು ರಕ್ಷಿಸಲಾಗಿದೆ. ಅವಶೇಷಗಳಡಿ ಇನ್ನೂ 17 ಮಂದಿ ಇರುವುದಾಗಿ ಶಂಕಿಸಲಾಗಿದೆ ಎಂದು ಲೆಬನಾನ್ ರೆಡ್ಕ್ರಾಸ್ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಶ್ವಸಂಸ್ಥೆಯಲ್ಲಿ ನೋಂದಾಯಿಸಿಕೊಂಡಿರುವ ಸುಮಾರು 8,05,000 ಸಿರಿಯಾದ ನಿರಾಶ್ರಿತರಿಗೆ ಲೆಬನಾನ್ ಆಶ್ರಯ ಒದಗಿಸಿದೆ. ಆದರೆ ಅಧಿಕಾರಿಗಳ ಪ್ರಕಾರ, ಲೆಬನಾನ್ನಲ್ಲಿ ಸುಮಾರು 2 ದಶಲಕ್ಷದಷ್ಟು ಸಿರಿಯಾದ ನಿರಾಶ್ರಿತರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News