ಲೆಬನಾನ್: ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಬಳಿ ಇಸ್ರೇಲ್ ಗ್ರೆನೇಡ್ ದಾಳಿ
PC : aljazeera.com
ಬೈರೂತ್, ಸೆ.3: ಲೆಬನಾನ್ ನಲ್ಲಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ನೆಲೆಯ ಬಳಿ ಇಸ್ರೇಲ್‍ನ ಡ್ರೋನ್ ಗಳು 4 ಗ್ರೆನೇಡ್‍ಗಳನ್ನು ಬೀಳಿಸಿದ್ದು ಇದು ನವೆಂಬರ್‍ನ ಕದನ ವಿರಾಮದ ಬಳಿಕ ತನ್ನ ಸಿಬ್ಬಂದಿಗಳ ಮೇಲೆ ನಡೆದ ಅತ್ಯಂತ ಗಂಭೀರ ದಾಳಿಯಲ್ಲಿ ಒಂದಾಗಿದೆ ಎಂದು ಲೆಬನಾನ್ ನಲ್ಲಿ ವಿಶ್ವಸಂಸ್ಥೆ ಮಧ್ಯಂತರ ಪಡೆ(ಯುಎನ್‍ಐಎಫ್‍ಐಎಲ್) ಬುಧವಾರ ಹೇಳಿದೆ.
ಮಂಗಳವಾರ ಲೆಬನಾನ್‍ನ ಆಗ್ನೇಯ ಗಡಿಯ ಸನಿಹದ ಮಾರ್ವಾಹಿನ್ ಹಳ್ಳಿಯ ಬಳಿ ವಿಶ್ವಸಂಸ್ಥೆಯ ಸ್ಥಾನಗಳನ್ನು ಪ್ರವೇಶಿಸಲು ಅಡ್ಡಿಯಾಗಿದ್ದ ರಸ್ತೆ ತಡೆಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದ ಶಾಂತಿಪಾಲಕರ ಸಮೀಪದಲ್ಲಿ ಇಸ್ರೇಲ್ ರಕ್ಷಣಾ ಪಡೆಗಳ ಡ್ರೋನ್ ಗಳು ನಾಲ್ಕು ಡ್ರೋನ್ ಗಳನ್ನು ಬೀಳಿಸಿವೆ.
ಒಂದು ಡ್ರೋನ್ ವಿಶ್ವಸಂಸ್ಥೆಯ ಸಿಬ್ಬಂದಿ ಹಾಗೂ ವಾಹನಗಳ 20 ಮೀಟರ್ ವ್ಯಾಪ್ತಿಯೊಳಗೆ ಹಾಗೂ ಇತರ ಮೂರು ಸುಮಾರು 100 ಮೀಟರ್ ವ್ಯಾಪ್ತಿಯೊಳಗೆ ಸ್ಫೋಟಗೊಂಡಿದೆ. ರಸ್ತೆ ತಡೆ ತೆರವು ಕಾಮಗಾರಿಯ ಬಗ್ಗೆ ಇಸ್ರೇಲ್ ಮಿಲಿಟರಿಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗಿತ್ತು. ಶಾಂತಿಪಾಲಕರ ಜೀವಗಳನ್ನು ಅಪಾಯಕ್ಕೆ ಒಡ್ಡುವ ಯಾವುದೇ ಕೃತ್ಯವು 2006ರ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯದ ಉಲ್ಲಂಘನೆಯಾಗುತ್ತದೆ ಎಂದು ಹೇಳಿಕೆ ತಿಳಿಸಿದೆ.