ಲಾಸ್ ಏಂಜಲೀಸ್ | ವಲಸಿಗರ ಪ್ರತಿಭಟನೆ ತೀವ್ರ; ಕರ್ಫ್ಯೂ ಹೇರಿಕೆ
ಡೊನಾಲ್ಡ್ ಟ್ರಂಪ್ | PC : PTI
ಲಾಸ್‌ಏಂಜಲೀಸ್: ಅಕ್ರಮ ವಲಸಿಗರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡಿರುವ ದಮನಕಾರಿ ಕ್ರಮಗಳ ವಿರುದ್ಧ ಲಾಸ್‌ಏಂಜಲೀಸ್‌ನಲ್ಲಿ ಭುಗಿಲೆದ್ದಿರುವ ಭಾರೀ ಪ್ರತಿಭಟನೆಯನ್ನು ನಿಯಂತ್ರಿಸಲು ಮಂಗಳವಾರ ರಾತ್ರಿ ನಗರದ ಪ್ರಮುಖ ಸ್ಥಳಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಪ್ರತಿಭಟನಾ ನಿರತ ನೂರಾರು ಮಂದಿಯನ್ನು ಚದುರಿಸಲು ಪ್ರೊಜೆಕ್ಟೈಲ್‌ಗಳನ್ನು ಬಳಸಲಾಗುತ್ತಿದೆ ಹಾಗೂ ಎಲ್ಲೆಡೆ ಅಶ್ವಾರೋಹಿ ಪೊಲೀಸರನ್ನು ನಿಯೋಜಿಸಲಾಗಿದೆ.
ಮಂಗಳವಾರ ರಾತ್ರಿ ವೇಳೆಗೆ ಹಲವಾರು ಮಂದಿ ಪ್ರತಿಭಟನಕಾರರನ್ನು ಚದುರಿಸಲಾಗಿದೆ. ಅಲ್ಲಲ್ಲಿ ಪೊಲೀಸ್ ಪಡೆಗಳ ಜೊತೆ ಪ್ರತಿಭಟನಕಾರರ ಘರ್ಷಣೆ ಮುಂದುವರಿದಿದೆಯಾದರೂ ಸೋಮವಾರಕ್ಕೆ ಹೋಲಿಸಿದರೆ, ಇಂದು ಅವುಗಳ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಗೂಂಡಾಗಿರಿ ಹಾಗೂ ಲೂಟಿಯಂತಹ ದುಷ್ಕೃತ್ಯಗಳನ್ನು ತಡೆಗಟ್ಟಲು ಕರ್ಫ್ಯೂ ಅಗತ್ಯವೆಂದು ಲಾಸ್ ಏಂಜಲೀಸ್‌ನ ಪೊಲೀಸ್ ಮುಖ್ಯಸ್ಥ ಜಿಮ್ ಮ್ಯಾಕ್‌ಡೊನೆಲ್ ಹೇಳಿದ್ದಾರೆ.
ಟ್ರಂಪ್ ಅವರು ಪ್ರತಿಭಟನಕಾರರನ್ನು ನಿಯಂತಿಸಲು ರಾಷ್ಟ್ರೀಯ ಭದ್ರತಾದಳ (ನ್ಯಾಶನಲ್ ಗಾರ್ಡ್) ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಲಾಸ್‌ಏಂಜಲೀಸ್ ನಗರವನ್ನು ಮಿಲಿಟರಿ ಬಲೆಯೊಳಗೆ ಎಳೆದು ತರುತ್ತಿದ್ದಾರೆಂದು ಗವರ್ನರ್ ಗೇವಿನ್ ನ್ಯೂಸ್ ಆರೋಪಿಸಿದ್ದಾರೆ.