ವಿಶ್ವಸಂಸ್ಥೆ ಸಾಮಾನ್ಯ ಸಭೆಯ ನೇಪಥ್ಯದಲ್ಲಿ ರಶ್ಯ-ಅಮೆರಿಕ ವಿದೇಶಾಂಗ ಸಚಿವರ ಸಭೆ
Update: 2025-09-25 20:26 IST
ನ್ಯೂಯಾರ್ಕ್, ಸೆ.25: ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯ 80ನೇ ಅಧಿವೇಶನದ ನೇಪಥ್ಯದಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ ಅವರು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ರಶ್ಯದ ವಿದೇಶಾಂಗ ಇಲಾಖೆ ಬುಧವಾರ ಹೇಳಿದೆ.
ಸುಮಾರು 50 ನಿಮಿಷ ನಡೆದ ಸಭೆಯಲ್ಲಿ ಎರಡೂ ದೇಶಗಳ ಉನ್ನತ ಮಟ್ಟದ ನಿಯೋಗವೂ ಪಾಲ್ಗೊಂಡಿತ್ತು. ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ಮೈಕ್ ವಾಲ್ಟ್ಸ್ ಕೂಡ ಉಪಸ್ಥಿತರಿದ್ದರು. ಹತ್ಯೆಗಳನ್ನು ನಿಲ್ಲಿಸುವಂತೆ ಅಧ್ಯಕ್ಷ ಟ್ರಂಪ್ ಅವರ ಕರೆಯನ್ನು ಮತ್ತು ರಶ್ಯ-ಉಕ್ರೇನ್ ಯುದ್ಧಕ್ಕೆ ಶಾಶ್ವತ ಪರಿಹಾರ ರೂಪಿಸಲು ರಶ್ಯ ಅರ್ಥಪೂರ್ಣ ಕ್ರಮ ಕೈಗೊಳ್ಳುವ ಅಗತ್ಯವನ್ನು ರೂಬಿಯೊ ಪುನರುಚ್ಚರಿಸಿದರು ಎಂದು ಅಮೆರಿಕದ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.