ಅಮೆರಿಕದ ಅಲಸ್ಕಾ ಕರಾವಳಿಯಲ್ಲಿ ಭಾರೀ ಭೂಕಂಪ: ಸುನಾಮಿ ಎಚ್ಚರಿಕೆ
ವಾಷಿಂಗ್ಟನ್: ಅಮೆರಿಕದ ಅಲಸ್ಕಾ ರಾಜ್ಯದಲ್ಲಿ ಬುಧವಾರ 7.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಅಮೆರಿಕದ ಜಿಯಲಾಜಿಕಲ್ ಸರ್ವೆ ಪ್ರಕಟಿಸಿದೆ.
ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12.37ರ ವೇಳೆಗೆ ಈ ಭೂಕಂಪ ಸಂಭವಿಸಿದ್ದು, ಕೇಂದ್ರೀಯ ಅಲಸ್ಕಾ ಪರ್ಯಾಯದ್ವೀಪದ ಕೇಂದ್ರಭಾಗ ಪೊಪೋಫ್ ದ್ವೀಪದ ಸ್ಯಾಂಡ್ ಪಾಯಿಂಟ್ ನಿಂದ 87 ಕಿಲೋಮೀಟರ್ ದೂರದಲ್ಲಿ ಇದರ ಕೇಂದ್ರ ಬಿಂದು ಇತ್ತು ಎಂದು ಹೇಳಿದೆ. ಈ ಭಯಾನಕ ಭೂಕಂಪ ಸುಮಾರು 20.1 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ.
ನ್ಯಾಷನಲ್ ಓಷನಿಕ್ ಅಂಡ್ ಅಟ್ಮಾಸ್ಪಿಯರಿಕ್ ಅಡ್ಮಿನಿಸ್ಟ್ರೇಷನ್ (ಎನ್ಓಎಎ) ಅಲಸ್ಕಾ ಪರ್ಯಾಯದ್ವೀಪದಾದ್ಯಂತ ಸುನಾಮಿ ಎಚ್ಚರಿಕೆ ನೀಡಿದೆ.
ಅಲಸ್ಕಾದ ಪಲ್ಮೇರ್ ನಲ್ಲಿರುವ ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರದ ಪ್ರಕಾರ, "ಸುನಾಮಿ ದೃಢಪಟ್ಟಿದ್ದು, ಇದರ ಪರಿಣಾಮವನ್ನು ನಿರೀಕ್ಷಿಸಲಾಗಿದೆ". ಮುನ್ನೆಚ್ಚರಿಕೆಯು ಫೆಸಿಫಿಕ್ ಕಡಲತೀರಕ್ಕೆ ನಿರ್ದಿಷ್ಟವಾಗಿದ್ದು, ಕೆನಡಿ ಎಂಟ್ರೆನ್ಸ್ ನಿಂದ ಉನಿಮಾಕ್ ಪಾಸ್ವರೆಗೆ ಸುನಾಮಿ ಭೀತಿ ಇದೆ ಎಂದು ಸ್ಪಷ್ಟಪಡಿಸಿದೆ. ಅಲಸ್ಕಾದಿಂದಾಚೆಗೆ ಸುನಾಮಿ ಎಚ್ಚರಿಕೆ ನೀಡಿಲ್ಲ.
ಸುಮಾರು 7.0 ಯಿಂದ 7.9 ತೀವ್ರತೆಯ ಭೂಕಂಪ ಭಾರಿ ಹಾನಿ ಮಾಡುವ ಸಾಧ್ಯತೆ ಇದೆ ಎಂದು ಪರಿಗಣಿಸಲಾಗುತ್ತದೆ. ಜಾಗತಿಕವಾಗಿ 10-15 ಇಂಥ ಭೂಕಂಪಗಳು ಪ್ರತಿ ವರ್ಷ ಸಂಭವಿಸುತ್ತವೆ.