×
Ad

"ಫೆಲೆಸ್ತೀನ್‌ನಲ್ಲಿ ನರಮೇಧ ನಡೆಯುತ್ತಿದೆ": ಪದವಿ ಸಮಾರಂಭದಲ್ಲಿ ಐಐಟಿ-ಮದ್ರಾಸ್ ವಿದ್ಯಾರ್ಥಿಯ ಕಳವಳ

Update: 2024-07-20 17:14 IST

Screengrab | YouTube/IIT-Madras

ಚೆನ್ನೈ: ಶುಕ್ರವಾರ ಇಲ್ಲಿ ನಡೆದ ಐಐಟಿ-ಮದ್ರಾಸ್‌ನ 61ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರ ಪ್ರಶಸ್ತಿಗೆ ಭಾಜನರಾದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರ ಧನಂಜಯ ಬಾಲಕೃಷ್ಣನ್ ಅವರು ಗಾಝಾದಲ್ಲಿ ನಡೆಯುತ್ತಿರುವ ಬೃಹತ್ ನರಮೇಧದ ವಿರುದ್ಧ ಕ್ರಮಕ್ಕೆ ಕರೆ ನೀಡಿದರು. ಸ್ಟೆಮ್ (ವಿಜ್ಞಾನ,ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ) ಅನ್ನು ಐತಿಹಾಸಿಕವಾಗಿ ಇಸ್ರೇಲ್‌ನಂತಹ ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ನೆರವಾಗಲು ಬಳಸಲಾಗಿದೆ ಎಂದು ಅವರು ಬೆಟ್ಟು ಮಾಡಿದರು. 

ರಾಜ್ಯಪಾಲರ ಪ್ರಶಸ್ತಿಯನ್ನು ಪ್ರತಿ ವರ್ಷ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸರ್ವತೋಮುಖ ಸಾಧನೆಯನ್ನು ಹೊಂದಿರುವ ವಿದ್ಯಾರ್ಥಿಗೆ ನೀಡಲಾಗುತ್ತದೆ. ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಅವಳಿ ಪದವಿಗಳನ್ನು ಪೂರ್ಣಗೊಳಿಸಿರುವ ಧನಂಜಯ 2024ನೇ ಸಾಲಿನ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ತನ್ನ ಪೋಷಕರು,ಪ್ರಾಧ್ಯಾಪಕರು ಮತ್ತು ಸಹ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದ ಬಳಿಕ ಧನಂಜಯ, ‘ಅತ್ಯಂತ ಮಹತ್ವದ ವಿಷಯವೊಂದನ್ನು ಹೇಳಲು ನಾನು ಈ ವೇದಿಕೆಯನ್ನು ಬಳಸದಿದ್ದರೆ ಅದು ಅನ್ಯಾಯವಾಗುತ್ತದೆ. ಫೆಲೆಸ್ತೀನ್‌ನಲ್ಲಿ ಭಾರೀ ನರಮೇಧ ನಡೆಯುತ್ತಿದೆ, ಜನರು ಭಾರೀ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ. ಇದಕ್ಕೆ ಅಂತ್ಯ ಗೋಚರವಾಗುತ್ತಿಲ್ಲ. ಈ ವೇದಿಕೆಯ ಮೂಲಕ ಗಾಝಾ ನರಮೇಧದ ವಿರುದ್ಧ ಕ್ರಮಕ್ಕೆ ನಾನು ಕರೆ ನೀಡುತ್ತಿದ್ದೇನೆ’ ಎಂದರು.

‘ನಾವೇಕೆ ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು ಎಂದು ಭಾವಿಸುತ್ತೀರಾ? ಏಕೆಂದರೆ ಸ್ಟೆಮ್ ( STEM - science, tehcnology, engineering, math) ಸ್ವತಃ ಒಂದು ಕ್ಷೇತ್ರವಾಗಿ ಇತಿಹಾಸ ಕಾಲದಿಂದಲೂ ಇಸ್ರೇಲ್‌ನಂತಹ ಸಾಮ್ರಾಜ್ಯಶಾಹಿ ಶಕ್ತಿಗಳ ಗುಪ್ತ ಉದ್ದೇಶಗಳನ್ನು ಮುಂದೊತ್ತಲು ಬಳಕೆಯಾಗಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿ ನಾವು ಅತ್ಯಂತ ಆಕರ್ಷಕ ವೇತನ ಮತ್ತು ಉತ್ತಮ ಲಾಭಗಳನ್ನು ನೀಡುವ ಟೆಕ್ ದೈತ್ಯ ಸಂಸ್ಥೆಗಳಲ್ಲಿ ಉನ್ನತ ಮಟ್ಟದ ಹುದ್ದೆಗಳನ್ನು ಪಡೆಯಲು ಶ್ರಮಿಸುತ್ತೇವೆ. ಆದರೆ ಈ ಟೆಕ್ ಸಂಸ್ಥೆಗಳು ಇಂದು ನಮ್ಮ ಜೀವನದ ವಿವಿಧ ಮಗ್ಗಲುಗಳನ್ನು ನಿಯಂತ್ರಿಸುತ್ತಿವೆ ಎನ್ನುವುದು ಇತರರಿಗಿಂತ ನಿಮಗೆ ಚೆನ್ನಾಗಿ ಗೊತ್ತು. ಇಂತಹ ಅನೇಕ ಪ್ರತಿಷ್ಠಿತ ಕಂಪನಿಗಳು ಇಸ್ರೇಲ್‌ಗೆ ತಂತ್ರಜ್ಞಾನವನ್ನು, ಕೊಲ್ಲಲು ಬಳಸುವ ತಂತ್ರಜ್ಞಾನವನ್ನು ಒದಗಿಸುವ ಮೂಲಕ ಫಲೆಸ್ತೀನ್ ವಿರುದ್ಧದ ಯುದ್ಧದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ತೊಡಗಿಸಿಕೊಂಡಿವೆ. ಯಾವುದೇ ಸುಲಭದ ಪರಿಹಾರಗಳಿಲ್ಲ ಮತ್ತು ನನ್ನ ಬಳಿ ಎಲ್ಲ ಉತ್ತರಗಳಿಲ್ಲ. ಆದರೆ ಇಷ್ಟು ಮಾತ್ರ ನನಗೆ ಗೊತ್ತು; ಇಂಜಿನಿಯರ್‌ಗಳಾಗಿ ನಾವು ನೈಜ ಪ್ರಪಂಚದಲ್ಲಿ ಕಾಲಿರಿಸುತ್ತಿದ್ದೇವೆ ಮತ್ತು ನಾವು ಮಾಡುವ ಕೆಲಸಗಳ ಪರಿಣಾಮಗಳ ಬಗ್ಗೆ ತಿಳಿದುಕೊಂಡಿರುವುದು ನಮ್ಮ ಕೆಲಸ. ಶಕ್ತಿಯ ಅಸಮತೋಲನದ ಈ ಸಂಕೀರ್ಣ ವ್ಯವಸ್ಥೆಗಳಲ್ಲಿ ನಮ್ಮ ನಿಲುವಿನ ಬಗ್ಗೆ ಆತ್ಮಾವಲೋಕನ ಕೂಡ ನಮ್ಮ ಕೆಲಸ. ಜಾತಿ,ವರ್ಗ,ಜನಾಂಗ ಮತ್ತು ಲಿಂಗದ ಆಧಾರದಲ್ಲಿ ತುಳಿತಕ್ಕೊಳಗಾದವರನ್ನು ವಿಮೋಚನೆಗೊಳಿಸಲು ನಾವು ಏನು ಮಾಡಬಹುದು ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸುವ ಮೂಲಕ ಈ ಅರಿವನ್ನು ನಮ್ಮ ದೈನಂದಿನ ಜೀವನದಲ್ಲಿ ಹೆಚ್ಚು ಹೆಚ್ಚಾಗಿ ಅಳವಡಿಸಿಕೊಳ್ಳಬಹದು ಎಂದು ನಾನು ಆಶಿಸಿದ್ದೇನೆ. ಇದು ದುಃಖದ ಎಂದಿಗೂ ಅಂತ್ಯಗೊಳ್ಳದ ಚಕ್ರವನ್ನು ನಿಗ್ರಹಿಸಲು ಮೊದಲ ಹೆಜ್ಜೆ ಎಂದು ನಾನು ನಂಬಿದ್ದೇನೆ ’ ಎಂದು ಧನಂಜಯ ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News