ಮಾರಿಷಸ್ | ಶಿವರಾತ್ರಿ ಕಾರ್ಯಕ್ರಮದ ಸಂದರ್ಭ ಅಗ್ನಿದುರಂತ; 6 ಮಂದಿ ಮೃತ್ಯು
Update: 2024-03-04 22:19 IST
Photo: livemint.com
ಪೋರ್ಟ್ ಲೂಯಿಸ್: ಮಾರಿಷಸ್ ನಲ್ಲಿ ಶಿವರಾತ್ರಿ ಆಚರಣೆಗೆ ಪೂರ್ವಭಾವಿಯಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮದ ಸಂದರ್ಭ ನಡೆದ ಅಗ್ನಿದುರಂತದಲ್ಲಿ 6 ಯಾತ್ರಾರ್ಥಿಗಳು ಸಾವನ್ನಪ್ಪಿದ್ದು ಇತರ 7 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಮಾರ್ಚ್ 8 ಮತ್ತು 9ರಂದು ನಡೆಯುವ ಶಿವರಾತ್ರಿ ಆಚರಣೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಯಾತ್ರಾರ್ಥಿಗಳು ಗ್ರ್ಯಾಂಡ್ ಬಾಸಿನ್ ಸರೋವರದಲ್ಲಿ ಸ್ನಾನಕ್ಕೆಂದು ತೆರಳುತ್ತಿದ್ದಾಗ ದುರಂತ ಸಂಭವಿಸಿದೆ. ಹಿಂದು ದೇವತೆಗಳ ಪ್ರತಿಮೆಗಳನ್ನು ಸಾಗಿಸುತ್ತಿದ್ದ ಮರದ ಮತ್ತು ಬಿದಿರಿನ ಬಂಡಿಗೆ ವಿದ್ಯುತ್ ತಂತಿಗಳು ಸ್ಪರ್ಷಿಸಿದಾಗ ಬೆಂಕಿ ಕಾಣಿಸಿಕೊಂಡಿದ್ದು 6 ಯಾತ್ರಾರ್ಥಿಗಳು ಸಾವನ್ನಪ್ಪಿದ್ದು 7 ಮಂದಿ ಗಾಯಗೊಂಡಿದ್ದಾರೆ.
ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಕಮಿಷನರ್ ಅನಿಲ್ ಕುಮಾರ್ ದೀಪ್ರನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ.