ಹಣ ಅಕ್ರಮ ವರ್ಗಾವಣೆ: ಮಾರಿಷಸ್ ಮಾಜಿ ಪ್ರಧಾನಿ ಪ್ರವಿಂದ್ ಜುಗ್ನಾತ್ ಬಂಧನ
Photo Credit | X/@KumarJugnauth
ಪೋರ್ಟ್ ಲೂಯಿಸ್: ಮಾರಿಷಸ್ ಮಾಜಿ ಪ್ರಧಾನಿ ಪ್ರವಿಂದ್ ಜುಗ್ನಾತ್ ಹಾಗೂ ಪತ್ನಿ ಕೊಬಿತಾ ಜುಗ್ನಾತ್ ರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪೊಲೀಸರು ಶನಿವಾರ ಬಂಧಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಎ ಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಪ್ರಕರಣದ ಮತ್ತೋರ್ವ ಶಂಕಿತ ಆರೋಪಿಯ ಮನೆಯ ಮೇಲೆ ನಡೆಸಿದ ದಾಳಿಯಲ್ಲಿ ಭಾರೀ ಪ್ರಮಾಣದ ನಗದು ವಶಕ್ಕೆ ಪಡೆಯಲಾಗಿದೆ. ಕೊಬಿತಾ ಜುಗ್ನಾತ್ ರನ್ನು ಬಳಿಕ ಬಿಡುಗಡೆಗೊಳಿಸಲಾಗಿದ್ದು ಪ್ರವಿಂದ್ ರನ್ನು ರವಿವಾರ ಬೆಳಿಗ್ಗೆ ಅಧಿಕೃತವಾಗಿ ಬಂಧಿಸಲಾಗಿದೆ.
2017ರಿಂದ 2024ರವರೆಗೆ ಮಾರಿಷನ್‍ನ ಪ್ರಧಾನಿಯಾಗಿದ್ದ ಪ್ರವಿಂದ್ ಹಿಂದೂ ಮಹಾಸಾಗರದ ಚಾಗೋಸ್ ದ್ವೀಪದ ಸಾರ್ವಭೌಮತ್ವವನ್ನು ಬ್ರಿಟನ್‍ನಿಂದ ಮರಳಿ ಪಡೆಯುವ ಪ್ರಕ್ರಿಯೆಯಲ್ಲಿ ವೈಯಕ್ತಿಕ ಆರ್ಥಿಕ ಪ್ರಯೋಜನ ಪಡೆದಿದ್ದಾರೆ. ಮಾರಿಷಸ್‍ನ ಮತ್ತೊಂದು ದ್ವೀಪ ಡಿಯೆಗೊ ಗಾರ್ಸಿಯಾದಲ್ಲಿ ಬ್ರಿಟನ್-ಅಮೆರಿಕ ಜಂಟಿ ಸೇನಾನೆಲೆ ಸ್ಥಾಪಿಸುವ ಒಪ್ಪಂದದಲ್ಲೂ ಹಣಕಾಸಿನ ಪ್ರಯೋಜನ ಪಡೆದಿದ್ದಾರೆ ಎಂದು ಆರೋಪಿಸಲಾಗಿದ್ದು ಕಳೆದ ನವೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಸೀವೂಸಾಗರ್ ರಾಮ್ ಗೊಲಮ್ ನೇತೃತ್ವದ ಸರಕಾರ ಆರ್ಥಿಕ ವಂಚನೆ ಮತ್ತು ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ.