×
Ad

ಆಲ್ಬೇನಿಯಾ: ಭ್ರಷ್ಟಾಚಾರ ತಡೆಯಲು ಎಐ ರಚಿತ ಸಚಿವೆ ‘ಡಿಯೆಲ್ಲಾ’ ನೇಮಕ!

Update: 2025-09-13 17:07 IST

Photo: X/@kosovo_update

ಟಿರಾನಾ(ಆಲ್ಬೇನಿಯಾ): ಭ್ರಷ್ಟಾಚಾರವನ್ನು ತಡೆಯಲು ಮತ್ತು ತನ್ನ ನೂತನ ಸಂಪುಟದಲ್ಲಿ ಪಾರದರ್ಶಕತೆ ಮತ್ತು ನವೀನತೆಯನ್ನು ಉತ್ತೇಜಿಸಲು ಆಲ್ಬೇನಿಯಾದ ಪ್ರಧಾನಿ ಎಡಿ ರಾಮಾ ಅವರು ಶುಕ್ರವಾರ ಕೃತಕ ಬುದ್ಧಿಮತ್ತೆ(ಎಐ) ರಚಿತ ‘ಸಚಿವೆ’ಯನ್ನು ನೇಮಕ ಮಾಡಿಕೊಂಡಿದ್ದಾರೆ.

ನೂತನ ಎಐ ಸಚಿವೆ ವರ್ಚುವಲ್ ಘಟಕವಾಗಿದ್ದು, ಆಲ್ಬೇನಿಯನ್ ಭಾಷೆಯಲ್ಲಿ ಸೂರ್ಯನಿಗೆ ಸ್ತ್ರೀರೂಪದ ಪದವಾದ ಡಿಯೆಲ್ಲಾ ಎಂದು ಅಧಿಕೃತವಾಗಿ ಹೆಸರಿಸಲಾಗಿದೆ.

ಭೌತಿಕವಾಗಿ ಉಪಸ್ಥಿತರಿಲ್ಲದ, ಆದರೆ ವರ್ಚುವಲ್ ಆಗಿ ರಚಿಸಲಾಗಿರುವ ಡಿಯೆಲ್ಲಾ ಸಚಿವ ಸಂಪುಟದ ಸದಸ್ಯೆಯಾಗಿರುತ್ತಾರೆ ಎಂದು ರಾಮಾ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕ ಟೆಂಡರ್‌ಗಳು ಶೇ.100ರಷ್ಟು ಭ್ರಷ್ಟಾಚಾರ ಮುಕ್ತವಾಗಿರುತ್ತವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಸರಕಾರವು ವೇಗವಾಗಿ ಮತ್ತು ಸಂಪೂರ್ಣ ಪಾರದರ್ಶಕತೆಯೊಂದಿಗೆ ಕೆಲಸ ಮಾಡಲು ಎಐ ಬಾಟ್ ನೆರವಾಗಲಿದೆ ಎಂದೂ ರಾಮಾ ಹೇಳಿದ್ದಾರೆ.

ಆಲ್ಬೇನಿಯಾದ ನ್ಯಾಷನಲ್ ಏಜೆನ್ಸಿ ಫಾರ್ ಇನ್ಫಾರ್ಮೇಷನ್ ಸೊಸೈಟಿಯ ವೆಬ್‌ಸೈಟ್ ಪ್ರಕಾರ ಡಿಯೆಲ್ಲಾ ತನಗೆ ಒಪ್ಪಿಸಲಾಗಿರುವ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ನಿಖರತೆಯನ್ನು ಖಚಿತಪಡಿಸಲು ಎಐನ ನವೀಕೃತ ಮಾದರಿಗಳ ಮತ್ತು ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತದೆ.

ಸಾಂಪ್ರದಾಯಕ ಆಲ್ಬೇನಿಯನ್ ಜಾನಪದ ವೇಷಭೂಷಣದ ಮಹಿಳೆಯನ್ನಾಗಿ ಬಿಂಬಿಸಲಾಗಿರುವ ಡಿಯೆಲ್ಲಾವನ್ನು ಈ ವರ್ಷದ ಆರಂಭದಲ್ಲಿ ಮೈಕ್ರೋಸಾಫ್ಟ್‌ನ ಸಹಕಾರದೊಂದಿಗೆ ಸರಕಾರದ ಡಿಜಿಟಲ್ ಆಡಳಿತದ ಅಂಗವಾದ ಇ-ಆಲ್ಬೇನಿಯಾದಲ್ಲಿ ಸಾರ್ವಜನಿಕರಿಗೆ ಸರಕಾರಿ ಸೇವೆಗಳ ಬಗ್ಗೆ ಮಾರ್ಗದರ್ಶನ ನೀಡಲು ವರ್ಚುವಲ್ ಅಸಿಸ್ಟಂಟ್ ಆಗಿ ಸೃಷ್ಟಿಸಲಾಗಿತ್ತು. ಅಲ್ಲಿ ಸುಮಾರು 10 ಲಕ್ಷ ವಿಚಾರಣೆಗಳಿಗೆ ಉತ್ತರಿಸಲು ಮತ್ತು ದಾಖಲೆಗಳನ್ನು ಪ್ರವೇಶಿಸಲು ನೆರವಾಗಿರುವ ಡಿಯೆಲ್ಲಾ ಈಗ ಸಚಿವೆಯಾಗಿ ಬಡ್ತಿ ಪಡೆದಿದೆ.

ನೂತನ ಸಚಿವ ಸಂಪುಟ ಕುರಿತು ಸಂಸದರು ಮತಗಳನ್ನು ಚಲಾಯಿಸಲಿದ್ದಾರೆ. ಆದರೆ ಡಿಯೆಲ್ಲಾದ ವರ್ಚುವಲ್ ಹುದ್ದೆಯ ಬಗ್ಗೆ ರಾಮಾ ಮತವನ್ನು ಕೇಳಲಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

ಡಿಯೆಲ್ಲಾದ ಅಧಿಕೃತ ಸ್ಥಾನಮಾನವನ್ನು ಸ್ಥಾಪಿಸಲು ಹೆಚ್ಚಿನ ಕಾರ್ಯವಿಧಾನಗಳು ಅಗತ್ಯವಾಗಬಹುದು ಎಂದು ಕಾನೂನು ತಜ್ಞರು ಹೇಳಿದ್ದಾರೆ.

ಡಿಯೆಲ್ಲಾದ ಸಚಿವ ಸ್ಥಾನಮಾನ ಅಸಾಂವಿಧಾನಿಕ ಎಂದು ಹೇಳಿರುವ ಪ್ರತಿಪಕ್ಷ ಡೆಮಾಕ್ರಟ್‌ನ ಸಂಸದೀಯ ಗುಂಪಿನ ನಾಯಕ ಗಝ್ಮೆಂಡ್ ಬರ್ಧಿ ಅವರು,ಪ್ರಧಾನ ಮಂತ್ರಿಯ ಮೂರ್ಖ ನಡವಳಿಕೆಯನ್ನು ಆಲ್ಬೇನಿಯನ್ ಸರಕಾರದ ಕಾನೂನು ಕ್ರಮಗಳನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News