ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳು, ಶಿಕ್ಷಣ ಕೇಂದ್ರಗಳಿಗೆ ಭೇಟಿ ನೀಡಿದ ಕರ್ನಾಟಕದ ಸಚಿವರ ನಿಯೋಗ
ಮೆಲ್ಬೋರ್ನ್ : ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಮತ್ತು ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಯು.ಟಿ. ಇಫ್ತಿಕಾರ್ ಫರೀದ್ ನೇತೃತ್ವದ ಕರ್ನಾಟಕದ ನಿಯೋಗವು ಅಧಿಕೃತ ಭೇಟಿಗಾಗಿ ಆಸ್ಟ್ರೇಲಿಯಾಕ್ಕೆ ತೆರಳಿದೆ.
ಮೆಲ್ಬೋರ್ನ್ ಗೆ ತೆರಳಿದ ನಿಯೋಗವು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆಯನ್ನು ನಡೆಸಿದೆ. ನಿಯೋಗವು ವಿಕ್ಟೋರಿಯನ್ ಸಂಸತ್ತಿಗೆ ತೆರಳಿದ್ದು, ಅಲ್ಲಿನ ಸ್ಥಳೀಯ ನೀತಿ ನಿರೂಪಕರು, ಶಿಕ್ಷಣ ತಜ್ಞರು ಜೊತೆ ಮಾತುಕತೆ ನಡೆಸಿದೆ. ಇದಲ್ಲದೆ ಮೆಲ್ಬೋರ್ನ್‌ನ ಎರಡು ಪ್ರಮುಖ ಆರೋಗ್ಯ ಸೌಲಭ್ಯ ಕೇಂದ್ರಗಳಾದ ಎಪ್ ವರ್ತ್ ರಿಚ್ ಮಂಡ್ ಹೆಲ್ತ್ ಕೇರ್ ಸಿಮ್ಯುಲೇಶನ್ ಮತ್ತು ಎಜುಕೇಶನ್ ಸೆಂಟರ್ ಮತ್ತು ಮೊನಾಶ್ ಹೆಲ್ತ್ ಗೆ ನಿಯೋಗವು ಭೇಟಿ ನೀಡಿದ್ದು, ಅಧಿಕಾರಿಗಳು ಮತ್ತು ವೈದ್ಯಕೀಯ ವೃತ್ತಿಪರರೊಂದಿಗೆ ಸಂವಾದ ನಡೆಸಿದೆ.
ನಿಯೋಗವು ಫೆಬ್ರವರಿ 2ರಂದು ಸಿಡ್ನಿಗೆ ತೆರಳಲಿದ್ದು, ಕಾನ್ಸುಲ್ ಜನರಲ್ ಕಚೇರಿ ಮತ್ತು ಸಿಡ್ನಿಯಲ್ಲಿ ವಿಶ್ವವಿದ್ಯಾನಿಲಯಗಳಿಗೆ ಭೇಟಿ ನೀಡಲಿದೆ. ಸರಕಾರದ ಪ್ರತಿನಿಧಿಗಳ ಜೊತೆ ಮಹತ್ವದ ಮಾತುಕತೆಯನ್ನು ನಡೆಸಲಿದ್ದಾರೆ. ನಿಯೋಗವು ಫೆಬ್ರವರಿ 6ರಂದು ಭಾರತಕ್ಕೆ ಮರಳಲಿದೆ.
ಆಸ್ಟ್ರೇಲಿಯಾದ ಕೆಲವು ಉನ್ನತ ವಿಶ್ವವಿದ್ಯಾಲಯಗಳಾದ ಸಿಡ್ನಿ ವಿಶ್ವವಿದ್ಯಾಲಯ, UNSW ಹೆಲ್ತ್, ಮ್ಯಾಕ್ವಾರಿ ವಿಶ್ವವಿದ್ಯಾಲಯ ಮತ್ತು ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾಲಯಕ್ಕೆ ತೆರಳಿ ಅಲ್ಲಿನ ಪ್ರತಿನಿಧಿಗಳೊಂದಿಗೆ ಮಾತುಕತೆಯನ್ನು ನಡೆಸಲಿದ್ದಾರೆ. ಈ ವೇಳೆ ಸಂಶೋಧನಾ ಸಹಯೋಗಗಳು, ಆರೋಗ್ಯ ರಕ್ಷಣೆಯಲ್ಲಿ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ನಿಯೋಗವು ಸಿಡ್ನಿಯಲ್ಲಿ ಅತ್ಯಾಧುನಿಕ ಆರೋಗ್ಯ ಆವಿಷ್ಕಾರ ಕೇಂದ್ರಗಳಾದ ವೆಸ್ಟ್‌ಮೀಡ್ ಹೆಲ್ತ್‌ಕೇರ್ ಮತ್ತು ಲಿವರ್ಪೂಲ್ ಇಂಗ್ಹ್ಯಾಮ್ ಇನ್ಸ್ಟಿಟ್ಯೂಟ್ ಗೆ ಭೇಟಿ ನೀಡಲಿದ್ದಾರೆ. ಈ ಕೇಂದ್ರಗಳು ಆರೋಗ್ಯ ಸಂಶೋಧನೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಸಾಧನೆಗಾಗಿ ಗುರುತಿಸಲ್ಪಟ್ಟಿವೆ. ಭೇಟಿಯ ವೇಳೆ ಕರ್ನಾಟಕದ ನಿಯೋಗವು ಸಂಶೋಧನೆ, ತಂತ್ರಜ್ಞಾನದ ವಿನಿಮಯದ ಕುರಿತು ಮಾತುಕತೆ ನಡೆಸಲಿದೆ. ಇದಲ್ಲದೆ ಕರ್ನಾಟಕ ಮತ್ತು ಆಸ್ಟ್ರೇಲಿಯಾ ನಡುವೆ ವೈದ್ಯಕೀಯ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಸಹಯೋಗಕ್ಕೆ ದಾರಿ ಮಾಡಿಕೊಡುವ ನಿರೀಕ್ಷೆಯಿದೆ.