×
Ad

ಇರಾನ್ ಯುದ್ದವನ್ನು ಟ್ರಂಪ್ ಸರಕಾರ ನಿಭಾಯಿಸುವ ರೀತಿ ಬಗ್ಗೆ ಗಲ್ಫ್ ರಾಷ್ಟ್ರಗಳ ಅತೃಪ್ತಿ

Update: 2026-03-06 20:29 IST

ಡೊನಾಲ್ಡ್ ಟ್ರಂಪ್ | Photo Credit: PTI

ಅಬುಧಾಬಿ, ಮಾ.6: ಅಮೆರಿಕದ ಮಿಲಿಟರಿ ವ್ಯವಸ್ಥೆಗಳಿಗೆ ನೆಲೆ ಒದಗಿಸಿರುವ ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಯನ್ನು ಇರಾನ್ ತೀವ್ರಗೊಳಿಸುತ್ತಿರುವಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಯುದ್ದವನ್ನು ನಿಭಾಯಿಸುವ ಬಗ್ಗೆ ಪ್ರದೇಶದ ಮಿತ್ರರಾಷ್ಟ್ರಗಳು ತೀವ್ರ ಅತೃಪ್ತಿ ಸೂಚಿಸಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಇರಾನ್‍ನ ದಾಳಿಗೆ ತಯಾರಾಗಲು ತಮಗೆ ಸಾಕಷ್ಟು ಸಮಯವನ್ನು ನೀಡಲಾಗಿಲ್ಲ. ಇರಾನ್‍ನ ವಿರುದ್ದ ಅಮೆರಿಕ-ಇಸ್ರೇಲ್ ದಾಳಿಗಳ ಬಗ್ಗೆ ಮುಂಚಿತವಾಗಿ ಸೂಚನೆ ನೀಡಲಾಗಿಲ್ಲ. ಯುದ್ದವು ಪ್ರದೇಶದಲ್ಲಿ ವಿನಾಶಕಾರಿ ಪರಿಣಾಮಕ್ಕೆ ಕಾರಣವಾಗುತ್ತದೆ ಎಂಬ ತಮ್ಮ ಎಚ್ಚರಿಕೆಯನ್ನು ಅಮೆರಿಕ ಕಡೆಗಣಿಸಿದೆ ಎಂದು ಗಲ್ಫ್ ರಾಷ್ಟ್ರಗಳು ದೂರಿವೆ. ಯುದ್ಧ ಪ್ರಾರಂಭವಾದಾಗಿನಿಂದ ಯುಎಇ, ಖತರ್, ಕುವೈತ್ ಸೇರಿದಂತೆ ಐದು ಅರಬ್ ರಾಷ್ಟ್ರಗಳನ್ನು ಗುರಿಯಾಗಿಸಿ ಇರಾನ್ ಕನಿಷ್ಠ 380 ಕ್ಷಿಪಣಿಗಳು ಮತ್ತು 1,480ಕ್ಕೂ ಹೆಚ್ಚು ಡ್ರೋನ್‍ಗಳನ್ನು ಪ್ರಯೋಗಿಸಿವೆ. ಈ ದಾಳಿಗಳಲ್ಲಿ ಕನಿಷ್ಠ 13 ಜನರು ಮೃತಪಟ್ಟಿರುವುದಾಗಿ ಸ್ಥಳೀಯ ಮೂಲಗಳು ಹೇಳಿವೆ.

ಈ ಮಧ್ಯೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಾದೇಶಿಕ ಮಿತ್ರರ ಜೊತೆ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ಶ್ವೇತಭವನ ಹೇಳಿದೆ. ಇರಾನ್‍ನ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗಳು 90%ದಷ್ಟು ಕಡಿಮೆಯಾಗಿದೆ. ತನ್ನ ನೆರಹೊರೆಯ ಮೇಲೆ ಇರಾನ್ ನಡೆಸುತ್ತಿರುವ ದಾಳಿಯು ನಮ್ಮ ದೇಶ ಮತ್ತು ಮಿತ್ರರಾಷ್ಟ್ರಗಳಿಗೆ ಈ ಬೆದರಿಕೆಯನ್ನು ತೊಡೆದುಹಾಕಲು ಅಧ್ಯಕ್ಷ ಟ್ರಂಪ್ ನಡೆಸುತ್ತಿರುವ ಪ್ರಯತ್ನದ ಮಹತ್ವವನ್ನು ಸಾಬೀತುಪಡಿಸಿದೆ ಎಂದು ಶ್ವೇತಭವನದ ವಕ್ತಾರೆ ಅನ್ನಾ ಕೆಲ್ಲಿ ಪ್ರತಿಪಾದಿಸಿದ್ದಾರೆ.

ಇರಾನ್‍ನಲ್ಲಿನ ಯುದ್ದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಬೆಳವಣಿಗೆಗಳು:

ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಆಕ್ರಮಣ ಮತ್ತು ಅದಕ್ಕೆ ಪ್ರತಿಯಾಗಿ ಇಸ್ರೇಲ್ ಮತ್ತು ಅಮೆರಿಕದ ನೆಲೆಗಳ ಮೇಲೆ ಇರಾನ್ ನಡೆಸಿದ ದಾಳಿಗೆ ಸಂಬಂಧಿಸಿದ ಕೆಲವು ಮಹತ್ವದ ಬೆಳವಣಿಗೆಗಳು:

►  ಈಗ ನಡೆಯುತ್ತಿರುವ ಪ್ರಾದೇಶಿಕ ಘರ್ಷಣೆಯಲ್ಲಿ ಇರಾನ್ ಮಿಲಿಟರಿ ದಾಳಿಗಳನ್ನು ಎಚ್ಚರಿಕೆಯಿಂದ ಅಮೆರಿಕದ ಗುರಿಗಳತ್ತ ನಿರ್ದೇಶಿಸಲಾಗಿದೆ. ನೆರೆಯ ಅರಬ್ ರಾಷ್ಟ್ರಗಳಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಇರಾನ್‍ನ ವಿದೇಶಾಂಗ ಇಲಾಖೆ ಪ್ರತಿಪಾದಿಸಿದೆ.

►  ಕುವೈತ್‌ ನಗರದ ಅಲಿ ಅಲ್-ಸಲೇಮ್ ವಾಯುನೆಲೆಯ(ಅಮೆರಿಕ ವಾಯುಪಡೆಯ ತುಕಡಿ ಇರುವ ಸೌಲಭ್ಯ) ಮೇಲೆ ಶುಕ್ರವಾರ ಮತ್ತೆ ಇರಾನ್ ದಾಳಿ ನಡೆಸಿದ್ದು ದಟ್ಟ ಹೊಗೆ ಆಗಸಕ್ಕೆ ವ್ಯಾಪಿಸಿರುವ ವೀಡಿಯೊ ವೈರಲ್ ಆಗಿದೆ.

►  ಇರಾನ್ ಮೇಲೆ ಇಸ್ರೇಲ್‍ನ ವೈಮಾನಿಕ ದಾಳಿ. ಟೆಹ್ರಾನ್ ನಗರದಲ್ಲಿ ಇರಾನ್ ಆಡಳಿತದ ಮೂಲಸೌಕರ್ಯವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಫೆಬ್ರವರಿ 28ರಂದು ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿದ್ದ ಇರಾನ್‍ನ ಪರಮೋಚ್ಛ ನಾಯಕ ಖಾಮಿನೈ ಅವರ ಭೂಗತಃ ಬಂಕರ್ ಮೇಲೆ 50 ಜೆಟ್‍ಗಳು ದಾಳಿ ನಡೆಸಿವೆ. ಈ ಬಂಕರ್ ಅನ್ನು ಇರಾನ್‍ನ ಹಿರಿಯ ಅಧಿಕಾರಿಗಳು ಬಳಸುತ್ತಿದ್ದರು ಎಂದು ಇಸ್ರೇಲ್ ಹೇಳಿದೆ.

►  ಮಧ್ಯಪ್ರಾಚ್ಯ ಸಂಘರ್ಷ ವಿಸ್ತರಿಸುತ್ತಿದ್ದು ಇರಾನ್ ವಿರುದ್ಧ ದಾಳಿ ನಡೆಸುವಂತೆ ಇರಾಕ್‍ನಲ್ಲಿರುವ ಇರಾನ್‍ನ ಕುರ್ದಿಶ್ ಪಡೆಗಳಿಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಹುರಿದುಂಬಿಸಿದ್ದಾರೆ.

►  ಶುಕ್ರವಾರ ವಾಯು ರಕ್ಷಣಾ ವ್ಯವಸ್ಥೆಯು 9 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 109 ಡ್ರೋನ್‍ಗಳನ್ನು ಹೊಡೆದುರುಳಿಸಿದೆ. 3 ಡ್ರೋನ್‍ಗಳು ಯುಎಇ ಪ್ರದೇಶದೊಳಗೆ ಬಿದ್ದಿವೆ ಎಂದು ಯುಎಇ ರಕ್ಷಣಾ ಇಲಾಖೆ ಹೇಳಿದೆ.

►  ಮಧ್ಯ ಪ್ರಾಚ್ಯ ಯುದ್ದ ಶುಕ್ರವಾರ 7ನೇ ದಿನಕ್ಕೆ ಮುಂದುವರಿದಿರುವಂತೆಯೇ, ಯುದ್ದದಲ್ಲಿ 2,100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇರಾನ್‍ನ 16 ನಗರಗಳ ಮೇಲೆ ದಾಳಿ ನಡೆದಿರುವುದಾಗಿ ವರದಿಯಾಗಿದೆ.

►  ಇರಾನ್ ಬೇಷರತ್ ಶರಣಾಗಬೇಕು. ರಾಜತಾಂತ್ರಿಕ ಪ್ರಯತ್ನಗಳಿಗೆ ಬಾಗಿಲು ಮುಚ್ಚಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಘೋಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News