×
Ad

2015ರಿಂದ ಈಡಿ ತನಿಖೆ ನಡೆಸಿರುವ ಕೇವಲ ಶೇ.0.1 ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ: ಕೇಂದ್ರ ಸರಕಾರ

Update: 2025-07-31 17:20 IST

PC ; Enforcement Directorate

ಹೊಸದಿಲ್ಲಿ: ಜಾರಿ ನಿರ್ದೇಶನಾಲಯವು ಜನವರಿ 2015 ಮತ್ತು ಜನವರಿ 2025ರ ನಡುವೆ ತನಿಖೆ ನಡೆಸಿದ 5,892 ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಕೇವಲ ಎಂಟು ಅಥವಾ ಶೇ.0.1ರಷ್ಟರಲ್ಲಿ ಮಾತ್ರ ಆರೋಪಿಗಳು ಶಿಕ್ಷೆಗೆ ಗುರಿಯಾಗಿದ್ದಾರೆ ಎಂದು ಕೇಂದ್ರ ಸರಕಾರವು ಸಂಸತ್ತಿನಲ್ಲಿ ತಿಳಿಸಿದೆ.

353 ಪೂರಕ ದೂರುಗಳು ಸೇರಿದಂತೆ 5,892 ಪ್ರಕರಣಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ)ಯಡಿ 1,398 ಪ್ರಾಸಿಕ್ಯೂಷನ್ ದೂರುಗಳನ್ನು ವಿಶೇಷ ನ್ಯಾಯಾಲಯಗಳಲ್ಲಿ ದಾಖಲಿಸಲಾಗಿತ್ತು. ಈ ಪೈಕಿ 66 ಪೂರಕ ದೂರುಗಳು ಸೇರಿದಂತೆ ಈವರೆಗೆ 300 ಪ್ರಾಸಿಕ್ಯೂಷನ್ ದೂರುಗಳಲ್ಲಿ ವಿಶೇಷ ನ್ಯಾಯಾಲಯಗಳು ಆರೋಪಗಳನ್ನು ರೂಪಿಸಿವೆ. ಜೂ.30ಕ್ಕೆ ಇದ್ದಂತೆ ಪಿಎಂಎಲ್‌ಎ ವಿಶೇಷ ನ್ಯಾಯಾಲಯಗಳು ಎಂಟು ದೋಷನಿರ್ಣಯ ಆದೇಶಗಳಲ್ಲಿ 15 ಜನರಿಗೆ ಶಿಕ್ಷೆಯನ್ನು ಘೋಷಿಸಿವೆ ಎಂದು ಕೇಂದ್ರ ಸಚಿವ ಪಂಕಜ್ ಚೌಧರಿಯವರು ರಾಜ್ಯಸಭೆಯಲ್ಲಿ ಟಿಎಂಸಿ ಸಂಸದ ಸಾಕೇತ್ ಗೋಖಲೆಯವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

10 ವರ್ಷಗಳ ಅವಧಿಯಲ್ಲಿ ಈಡಿ ವಿಶೇಷ ನ್ಯಾಯಾಲಯಗಳಿಗೆ 49 ಮುಕ್ತಾಯ ವರದಿಗಳನ್ನು ಸಲ್ಲಿಸಿವೆ ಎಂದೂ ಅವರು ತಿಳಿಸಿದರು.

ಸಚಿವರ ಉತ್ತರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಗೋಖಲೆ, ಈಡಿ ಹೇಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ‘ರಾಜಕೀಯ ಮಾಫಿಯಾ’ದಂತೆ ಕಾರ್ಯ ನಿರ್ವಹಿಸಿದೆ ಎನ್ನುವುದನ್ನು ದತ್ತಾಂಶಗಳು ತೋರಿಸಿವೆ ಎಂದು ಹೇಳಿದ್ದಾರೆ.

10 ವರ್ಷಗಳಲ್ಲಿ ಈಡಿ ದಾಖಲಿಸಿಕೊಂಡ ಎಲ್ಲ ಪ್ರಕರಣಗಳ ಪೈಕಿ ಆಘಾತಕಾರಿಯಾಗಿ ಶೇ.77ರಷ್ಟು ಪ್ರಕರಣಗಳು ಶೂನ್ಯ ಸಾಕ್ಷ್ಯಾಧಾರಗಳಿಂದಾಗಿ ನ್ಯಾಯಾಲಯಗಳ ಮುಂದೆ ಎಂದೂ ವಿಚಾರಣೆಗೆ ಬರಲೇ ಇಲ್ಲ ಎಂದು ಹೇಳಿರುವ ಗೋಖಲೆಯವರು, ಮೋದಿ ಸರಕಾರವು ಪ್ರತಿಪಕ್ಷವನ್ನು ಗುರಿಯಾಗಿಸಿಕೊಳ್ಳಲು ಈಡಿಯನ್ನು ‘ವೈಯಕ್ತಿಕ ಮಾಫಿಯಾ’ವನ್ನಾಗಿ ಬಳಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

ಇಲ್ಲಿ ಪ್ರಕ್ರಿಯೆಯೇ ಶಿಕ್ಷೆ, ಏಕೆಂದರೆ ಅಮಾಯಕರು ಸಹ ಜಾಮೀನು ಪಡೆದುಕೊಳ್ಳಲು ತಿಂಗಳುಗಟ್ಟಲೆ ಬೇಕಾಗುತ್ತವೆ ಎಂದಿರುವ ಗೋಖಲೆ, ಕೋಟ್ಯಾಂತರ ರೂ.ಗಳ ಸಾರ್ವಜನಿಕ ಹಣದ ವೆಚ್ಚ ಮತ್ತು ಸಾವಿರಾರು ಜನರನ್ನು ಜೈಲಿಗೆ ತಳ್ಳಿದ ಬಳಿಕವೂ 10 ವರ್ಷಗಳಲ್ಲಿ ಈಡಿಯ ಯಶಸ್ಸಿನ ದರ ಕೇವಲ ಶೇ.0.13ರಷ್ಟಿದೆ. ಈಡಿ ಮೋದಿ ಮತ್ತು ಶಾ ಅವರ ಕ್ರಿಮಿನಲ್ ಸಿಂಡಿಕೇಟ್ ಹೊರತು ಬೇರೇನೂ ಅಲ್ಲ, ಬಿಜೆಪಿಗಾಗಿ ಸುಲಿಗೆ ದಂಧೆ ಮತ್ತು ವಾಷಿಂಗ್ ಮಷಿನ್‌ಗಳನ್ನು ನಡೆಸುವುದು ಅದರ ಏಕೈಕ ಕೆಲಸವಾಗಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News