×
Ad

ಟ್ರಂಪ್ ವಿಧಿಸಿದ ಬಹುತೇಕ ಸುಂಕ ಕಾನೂನುಬಾಹಿರ : ಅಮೆರಿಕ ಕೋರ್ಟ್

Update: 2025-08-30 07:06 IST

ಡೊನಾಲ್ಡ್ ಟ್ರಂಪ್ | PC : PTI

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರು ತುರ್ತು ಅಧಿಕಾರದ ಅಡಿಯಲ್ಲಿ ವಿಧಿಸಿರುವ ಬಹುತೇಕ ಸುಂಕ ಕಾನೂನುಬಾಹಿರ ಎಂದು ಅಮೆರಿಕದ ಫೆಡರಲ್ ಮೇಲ್ಮನವಿ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ. ಈ ಮೂಲಕ ಟ್ರಂಪ್ ವ್ಯಾಪಾರ ನೀತಿಯ ಬುಡಕ್ಕೆ ಬಲವಾದ ಏಟು ನೀಡಿದ್ದು, ಸುಪ್ರೀಂಕೋರ್ಟ್‍ನಲ್ಲಿ ಅಮೆರಿಕ ಅಧ್ಯಕ್ಷರು ಕಾನೂನು ಹೋರಾಟ ಮುಂದುವರಿಸುವ ನಿರೀಕ್ಷೆ ಇದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.

ವಾಷಿಂಗ್ಟನ್ ಡಿಸಿಯಲ್ಲಿರುವ ಯುಎಸ್ ಕೋರ್ಟ್ ಆಫ್ ಅಪೀಲ್ಸ್ ಫಾರ್ ದ ಫೆಡರಲ್ ಸಕ್ರ್ಯೂಟ್, ಟ್ರಂಪ್ ವಿಧಿಸಿರುವ ಎರಡು ಬಗೆಯ ಸುಂಕಗಳನ್ನು ಅಕ್ರಮ ಎಂದು ಘೋಷಿಸಿದ್ದು, ಇದರಲ್ಲಿ ವ್ಯಾಪಾರ ಸಮರದ ಅಂಗವಾಗಿ ಏಪ್ರಿಲ್‍ನಲ್ಲಿ ವಿಧಿಸಿದ 'ಪ್ರತಿಸುಂಕ' ಮತ್ತು ಚೀನಾ, ಕೆನಡಾ ಮತ್ತು ಮೆಕ್ಸಿಕೋ ವಿರುದ್ಧ ಫೆಬ್ರವರಿಯಲ್ಲಿ ವಿಧಿಸಿದ ಮತ್ತೊಂದು ಸುತ್ತಿನ ಸುಂಕ ಸೇರಿದೆ. ಉಕ್ಕು ಮತ್ತು ಅಲ್ಯೂಮೀನಿಯಂ ಆಮದಿನ ಮೇಲೆ ಟ್ರಂಪ್ ವಿಧಿಸಿರುವ ಪ್ರತ್ಯೇಕ ಸುಂಕಗಳನ್ನು ಈ ತೀರ್ಪು ಒಳಗೊಳ್ಳುವುದಿಲ್ಲ.

"ಘೋಷಿತ ರಾಷ್ಟ್ರೀಯ ತುರ್ತು ಪರಿಸ್ಥಿತಿಗೆ ಪ್ರತಿಸ್ಪಂದನಾತ್ಮಕವಾಗಿ ಹಲವು ಕ್ರಮಗಳನ್ನು ಕೈಗೊಳ್ಳಲು ಅಧ್ಯಕ್ಷರಿಗೆ ಶಾಸನಗಳು ಸಾಕಷ್ಟು ಅಧಿಕಾರವನ್ನು ನೀಡಿವೆ. ಆದರೆ ಈ ಯಾವ ಕ್ರಮಗಳು ಕೂಡಾ ಸುಂಕ, ಶುಲ್ಕ ಅಥವಾ ತೆರಿಗೆಯನ್ನು ವಿಧಿಸುವ ಅಧಿಕಾರವನ್ನು ಒಳಗೊಂಡಿಲ್ಲ" ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ. 7 ನ್ಯಾಯಮೂರ್ತಿಗಳು ತೀರ್ಪಿನ ಪರವಾಗಿ ಹಾಗೂ 4 ನ್ಯಾಯಮೂರ್ತಿಗಳು ವಿರುದ್ಧವಾಗಿ ಅಭಿಪ್ರಾಯ ದಾಖಲಿಸಿದ್ದಾರೆ.

ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (ಐಇಇಪಿಎ) ನೀಡಿರುವ ಅಧಿಕಾರದ ವ್ಯಾಪ್ತಿಯನ್ನೂ ಟ್ರಂಪ್ ಮೀರಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಈ ತೀರ್ಪನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಟುವಾಗಿ ಟೀಕಿಸಿದ್ದು, ಇದರ ಜಾರಿಗೆ ಅವಕಾಶ ನೀಡಿದರೆ ಇದು ದೇಶಕ್ಕೆ ಹಾನಿಕಾರಕವಾಗಲಿದೆ ಎಂದು ಎಚ್ಚರಿಸಿದ್ದಾರೆ. ತಮ್ಮ ಟ್ರುಥ್ ಸೋಶಿಯಲ್‍ನಲ್ಲಿ ಈ ಸಂಬಂಧ ಪೋಸ್ಟ್ ಮಾಡಿರುವ ಟ್ರಂಪ್ "ಇದು ಪಕ್ಷಪಾತಯುಕ್ತ" ತೀರ್ಪು ಎಂದು ಬಣ್ಣಿಸಿದ್ದಾರೆ. ಸುಪ್ರೀಂಕೋರ್ಟ್ ಈ ವಿಚಾರದಲ್ಲಿ ತಮ್ಮ ಪರವಾಗಿ ತೀರ್ಪು ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News