ಎಪ್ಸ್ಟೀನ್ ಕಡತಗಳಲ್ಲಿ ಟ್ರಂಪ್ ಹೆಸರು ಎಂಬ ತಮ್ಮ ಪೋಸ್ಟ್ ಅನ್ನು ಅಳಿಸಿ ಹಾಕಿದ ಎಲಾನ್ ಮಸ್ಕ್
ವಾಷಿಂಗ್ಟನ್: ಲೈಂಗಿಕ ಕಾರ್ಯಕರ್ತೆ ಜೆಫ್ರಿ ಎಪ್ಸ್ಟೀನ್ ಕಡತಗಳಲ್ಲಿ ಡೊನಾಲ್ಡ್ ಟ್ರಂಪ್ ಹೆಸರಿರುವುದರಿಂದ, ಈ ಕಡತಗಳನ್ನೆಂದೂ ಸಾರ್ವಜನಿಕಗೊಳಿಸಿಲ್ಲ ಎಂದು ಆರೋಪಿಸಿ ತಾವು ಮಾಡಿದ್ದ ಪೋಸ್ಟ್ ಅನ್ನು ಅಳಿಸಿ ಹಾಕಿರುವ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೊಂದಿಗೆ ಸಂಧಾನ ಸಾಧ್ಯತೆಯ ಸುಳಿವು ನೀಡಿದ್ದಾರೆ.
ಇದಕ್ಕೂ ಮುನ್ನ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಕೋಟ್ಯಧಿಪತಿ ಉದ್ಯಮಿ ಎಲಾನ್ ಮಸ್ಕ್ ನಡುವೆ ಗುರುವಾರ ಸಾರ್ವಜನಿಕವಾಗಿಯೇ ಜಟಾಪಟಿ ನಡೆದಿತ್ತು. ಇದರಿಂದಾಗಿ, ಅಸಹಜ ಹೆಸರೊಂದು ಮುನ್ನೆಲೆಗೆ ಬರುವ ಮೂಲಕ, ಅಮೆರಿಕ ಅಧ್ಯಕ್ಷರ ಸುತ್ತ ವಿವಾದವೊಂದು ಸುತ್ತಿಕೊಂಡಿತ್ತು.
ಎಲಾನ್ ಮಸ್ಕ್ ಸರಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥರಾದ ನಂತರ, ಅವರ ವ್ಯವಹಾರಗಳಿಗೆ ಆದ ನಷ್ಟದ ಕುರಿತು ಕಳೆದ ತಿಂಗಳು ಅಮೆರಿಕ ಸರಕಾರ ಗಮನ ಹರಿಸುವಂತೆ ಮಾಡಿತ್ತು. ಇದರ ಬೆನ್ನಿಗೇ, ಡೊನಾಲ್ಡ್ ಟ್ರಂಪ್ ರೊಂದಿಗೆ ಅವರು ತಿಕ್ಕಾಟಕ್ಕಿಳಿದಿದ್ದರು.
ಗುರುವಾರ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಎಲಾನ್ ಮಸ್ಕ್, “ಡೊನಾಲ್ಡ್ ಟ್ರಂಪ್ ಹೆಸರು ಎಪ್ಸ್ಟೀನ್ ಕಡತಗಳಲ್ಲಿದೆ. ಅವು ಸಾರ್ವಜನಿಕಗೊಳ್ಳದಿರಲು ಅದೇ ನೈಜ ಕಾರಣ. ಶುಭ ದಿನ, ಡೊನಾಲ್ಟ್ ಜಾನ್ ಟ್ರಂಪ್!” ಎಂದು ಕಾಲೆಳೆದಿದ್ದರು. ಆದರೆ, ಇದೀಗ ಅವರು ಈ ಪೋಸ್ಟ್ ಅನ್ನು ಅಳಿಸಿ ಹಾಕಿದ್ದಾರೆ.
POLITICO ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಎಲಾನ್ ಮಸ್ಕ್ ಕುರಿತು ಡೊನಾಲ್ಡ್ ಟ್ರಂಪ್ ರ ಸಾರ್ವಜನಿಕ ಟೀಕೆಗೆ ಅಂತ್ಯ ಹಾಡಲು ಶ್ವೇತ ಭವನದ ಸಹಾಯಕರು ಕಾರ್ಯಪ್ರವೃತ್ತರಾಗಿದ್ದಾರೆ ಎನ್ನಲಾಗಿದೆ.