ಮ್ಯಾನ್ಮಾರ್ ನಲ್ಲಿ ವರ್ಷಾಂತ್ಯಕ್ಕೆ ಚುನಾವಣೆ: ಸೇನಾಡಳಿತದ ಹೇಳಿಕೆ
PC : NDTV
ಯಾಂಗಾನ್: ಡಿಸೆಂಬರ್ ಮತ್ತು ಜನವರಿಯಲ್ಲಿ ದೇಶದಲ್ಲಿ ಚುನಾವಣೆ ನಡೆಸಲು ಯೋಜಿಸಿರುವುದಾಗಿ ಮ್ಯಾನ್ಮಾರ್ ಸೇನಾಡಳಿತದ ಮುಖ್ಯಸ್ಥರನ್ನು ಉಲ್ಲೇಖಿಸಿ `ದಿ ಗ್ಲೋಬಲ್ ನ್ಯೂಲೈಟ್ ಆಫ್ ಮ್ಯಾನ್ಮಾರ್' ಗುರುವಾರ ವರದಿ ಮಾಡಿದೆ.
ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಯ್ಕೆಗೊಂಡಿದ್ದ ಸರ್ಕಾರವನ್ನು 2021ರಲ್ಲಿ ಕ್ಷಿಪ್ರದಂಗೆಯ ಮೂಲಕ ಪದಚ್ಯುತಗೊಳಿಸಿದ್ದ ಸೇನೆಯು ಆಡಳಿತವನ್ನು ವಶಕ್ಕೆ ಪಡೆದಿತ್ತು. ರಾಜಧಾನಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸೇನಾಡಳಿತದ ಮುಖ್ಯಸ್ಥ ಮಿನ್ ಆಂಗ್ ಹ್ಲಿಯಾಂಗ್ `ಈ ವರ್ಷದ ಡಿಸೆಂಬರ್ ಮತ್ತು ಮುಂದಿನ ವರ್ಷದ ಜನವರಿಯಲ್ಲಿ ಚುನಾವಣೆ ನಡೆಯಲು ನಿರ್ಧರಿಸಲಾಗಿದೆ' ಎಂದಿದ್ದಾರೆ.
ಬುಧವಾರ ಹೇಳಿಕೆ ನೀಡಿದ್ದ ಮ್ಯಾನ್ಮಾರ್ ನಲ್ಲಿನ ಹಕ್ಕುಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಟಾಮ್ ಆಂಡ್ರೂಸ್ ` ಸೇನಾಡಳಿತವು ಚುನಾವಣೆಯ ಭ್ರಮೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ನಿಮ್ಮ ವಿರೋಧಿಗಳನ್ನು ಬಂಧನದಲ್ಲಿಟ್ಟು, ಚಿತ್ರಹಿಂಸೆ ನೀಡಿ ನೀವು ಚುನಾವಣೆ ನಡೆಸಲು ಸಾಧ್ಯವಿಲ್ಲ. ಪತ್ರಕರ್ತನಾಗಿ ಸತ್ಯವನ್ನು ವರದಿ ಮಾಡುವುದು , ಸೇನಾಡಳಿತವನ್ನು ಟೀಕಿಸುವುದು ಕಾನೂನುಬಾಹಿರ ಎಂಬಂತಹ ಸ್ಥಿತಿಯಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲ' ಎಂದಿದ್ದರು.