ಮ್ಯಾನ್ಮಾರ್ ನಲ್ಲಿ ಡಿಸೆಂಬರ್ 28ರಿಂದ ಸಾರ್ವತ್ರಿಕ ಚುನಾವಣೆ: ವರದಿ
PC : X
ಯಾಂಗಾನ್: ಮ್ಯಾನ್ಮಾರ್ ನಲ್ಲಿ ದೀರ್ಘಾವಧಿಯಿಂದ ನಿರೀಕ್ಷಿಸಲಾಗಿದ್ದ ಸಾರ್ವತ್ರಿಕ ಚುನಾವಣೆ ಡಿಸೆಂಬರ್ 28ರಿಂದ ಆರಂಭಗೊಂಡು ಹಂತ ಹಂತವಾಗಿ ನಡೆಯಲಿದೆ ಎಂದು ಮಿಲಿಟರಿ ಸರಕಾರ ಘೋಷಿಸಿದೆ.
ಹಂತ ಹಂತವಾಗಿ ಮತದಾನ ನಡೆಯಲಿದ್ದು ಸುಮಾರು 55 ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಲು ನೋಂದಣಿ ಮಾಡಿಕೊಂಡಿವೆ ಎಂದು ಚುನಾವಣಾ ಆಯೋಗ ಹೇಳಿದೆ.
2021ರಲ್ಲಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಅಧಿಕಾರಕ್ಕೆ ಬಂದಿದ್ದ ಆಂಗ್ ಸಾನ್ ಸೂಕಿ ಪಕ್ಷದ ಸರಕಾರವನ್ನು ಕ್ಷಿಪ್ರ ದಂಗೆಯ ಮೂಲಕ ಪದಚ್ಯುತಗೊಳಿಸಿದ್ದ ಮಿಲಿಟರಿ ಅಧಿಕಾರವನ್ನು ವಶಪಡಿಸಿಕೊಂಡಿತ್ತಲ್ಲದೆ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿತ್ತು. ಕಳೆದ ತಿಂಗಳು ಕೆಲವು ಭಾಗಗಳಲ್ಲಿ ತುರ್ತು ಪರಿಸ್ಥಿತಿಯನ್ನು ಹಿಂಪಡೆದಿರುವುದಾಗಿ ಮಿಲಿಟರಿ ಆಡಳಿತ ಹೇಳಿತ್ತು.
ಚುನಾವಣೆ ಪಾರದರ್ಶಕವಾಗಿ ನಡೆಯುವ ಬಗ್ಗೆ ಅನುಮಾನವಿದೆ ಮತ್ತು ತನ್ನ ಅಧಿಕಾರವನ್ನು ಮರುಸ್ಥಾಪಿಸಲು ಸೇನಾಡಳಿತದ ಮುಖ್ಯಸ್ಥ ಮಿನ್ ಆಂಗ್ ಹ್ಲಿಯಾಂಗ್ ಚುನಾವಣೆಯನ್ನು ನೆಪವಾಗಿಸಿದ್ದಾರೆ ಎಂದು ಆರೋಪಿಸಿ ಆಂಗ್ ಸಾನ್ ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ.