×
Ad

ಮ್ಯಾನ್ಮಾರ್ | ಹಬ್ಬದ ಸಮಾರಂಭದ ಮೇಲೆ ಸೇನೆಯಿಂದ ಬಾಂಬ್ ದಾಳಿ; ಕನಿಷ್ಠ 40 ಮಂದಿ ಮೃತ್ಯು

Update: 2025-10-08 22:36 IST

Photo Credit : X 

ನೈಪಿ ತಾವ್,ಅ.8: ಹಬ್ಬದ ಕಾರ್ಯಕ್ರಮವೊಂದರ ಮೇಲೆ ಮ್ಯಾನ್ಮಾರ್ ಸೇನೆ ನಡೆಸಿದ ದಾಳಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 40 ಮಂದಿ ಸಾವನ್ನಪ್ಪಿದ್ದಾರೆ ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಸೋಮವಾರ ಸಂಜೆ ನಡೆದ ಪಾರಂಪರಿಕ ‘ಥಾಡಿನ್‌ಗ್ಯುಟ್’ ಹುಣ್ಣಿಮೆ ಉತ್ಸವದ ಆಚರಣೆಗಾಗಿ ಚಾವುಂಗ್‌ ವೂ ವಸತಿ ಪ್ರದೇಶದಲ್ಲಿ ಜಮಾಯಿಸಿದ್ದ ನೂರಾರು ಮಂದಿಯ ಗುಂಪಿನ ಮೇಲೆ ಮ್ಯಾನ್ಮಾರ್ ಸೇನೆ ಬಾಂಬ್‌ಗಳನ್ನು ಎಸೆದಿದೆ ಎಂದು ಕಾರ್ಯಕ್ರಮವನ್ನು ಆಯೋಜಿಸಿದ್ದ ಸ್ಥಳೀಯ ಸಮಿತಿಯ ಸದಸ್ಯೆಯೊಬ್ಬರು ತಿಳಿಸಿದ್ದಾರೆ.

ಸೇನೆಯ ದಾಳಿ ಬಗ್ಗೆ ಸಮಿತಿಯು ಜನರನ್ನು ಎಚ್ಚರಿಸಿದ್ದರಿಂದ ಗುಂಪಿನಲ್ಲಿದ್ದ ಮೂರನೇ ಒಂದರಷ್ಟು ಮಂದಿ ಪರಾರಿಯಾಗಿ ಜೀವವುಳಿಸಿಕೊಂಡಿದ್ದಾರೆಂದು ಆಕೆ ಹೇಳಿದ್ದಾರೆ. ಇದೇ ವೇಳೆ ಮೋಟಾರ್ ಚಾಲಿತ ಪವರ್‌ ಗ್ಲೈಡರ್ ಜನಜಂಗುಳಿಯ ಮೇಲೆ ಹಾರಾಡುತ್ತಾ, ಎರಡು ಬಾಂಬ್‌ ಗಳನ್ನು ಎಸೆದಿದೆ ಎಂದು ಆಕೆ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಾನವಹಕ್ಕುಗಳ ಸಂಘಟನೆ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಈ ಹತ್ಯಾಕಾಂಡವನ್ನು ಖಂಡಿಸಿದೆ. ಮ್ಯಾನ್ಮಾರ್ ನಾಗರಿಕರಿಗೆ ತುರ್ತಾಗಿ ರಕ್ಷಣೆಯ ಅಗತ್ಯವಿದೆಯೆಂಬುದ್ಕೆ ಈ ದಾಳಿಯು ಘೋರವಾದ ಎಚ್ಚರಿಕೆಯ ಗಂಟೆಯಾಗಿದೆ ಎಂದು ಅದು ಹೇಳಿದೆ. ತನ್ನ ವಿರುದ್ಧ ಪ್ರತಿರೋಧ ಪ್ರದರ್ಶಿಸುವ ಸ್ಥಳಗಳ ಮೇಲೆ ಮ್ಯಾನ್ಮಾರ್ ಸೇನೆ ತನ್ನ ಭೀಭತ್ಸ ಅಭಿಯಾನವನ್ನು ತೀವ್ರಗೊಳಿಸಿದೆಯೆಂಬುದನ್ನು ಈ ದಾಳಿಯು ನಿರೂಪಿಸಿದೆ ಎಂದು ಅದು ಹೇಳಿದೆ.

2021ರಲ್ಲಿ ನಡೆದ ದಂಗೆಯಲ್ಲಿ ಸೇನೆಯು ಅಧಿಕಾರವನ್ನು ವಶಪಡಿಸಿಕೊಂಡಾಗಿನಿಂದ ಮ್ಯಾನ್ಮಾರ್‌ನಲ್ಲಿ ಅಂತರ್ಯುದ್ಧ ತಾಂಡವವಾಡುತ್ತಿದೆ. ಪ್ರಜಾಪ್ರಭುತ್ವ ಪರ ಬಂಡುಕೋರರು ಹಾಗೂ ಜನಾಂಗೀಯ ಗುಂಪುಗಳು ಜೊತೆಗೂಡಿ ಸೇನಾಪಡೆಗಳ ವಿರುದ್ಧ ಸಶಸ್ತ್ರ ಸಮರವನ್ನು ನಡೆಸುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News