ಮ್ಯಾನ್ಮಾರ್ ಚುನಾವಣೆಯಲ್ಲಿ ಗೆಲುವು: ಯುಎಸ್‍ಡಿಪಿ ಹೇಳಿಕೆ
Photo Credit : aljazeera.com
ಯಾಂಗಾನ್, ಜ.27: ದೇಶದಲ್ಲಿ ನಡೆದ ಚುನಾವಣೆಯಲ್ಲಿ ಜನ ತಮ್ಮನ್ನು ಗೆಲ್ಲಿಸಿದ್ದಾರೆ ಎಂದು ಮಿಲಿಟರಿ ಪರ ಪಕ್ಷ ಯೂನಿಯನ್ ಸಾಲಿಡಾರಿಟಿ ಆ್ಯಂಡ್ ಡೆವಲಪ್‍ಮೆಂಟ್ ಪಾರ್ಟಿ(ಯುಎಸ್‍ಡಿಪಿ)ಯ ಮೂಲಗಳು ಹೇಳಿರುವುದಾಗಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ ಮತ್ತು ಹೊಸ ಸರಕಾರ ರಚಿಸುವ ಸ್ಥಿತಿಯಲ್ಲಿದ್ದೇವೆ ಎಂದು ಪಕ್ಷದ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ. ಅಧಿಕೃತ ಫಲಿತಾಂಶ ಈ ವಾರಾಂತ್ಯ ಘೋಷಣೆಯಾಗುವ ನಿರೀಕ್ಷೆಯಿದೆ.
2021ರಲ್ಲಿ ಕ್ಷಿಪ್ರದಂಗೆಯ ಮೂಲಕ ಆಂಗ್ ಸಾನ್ ಸೂಕಿ ಅವರ ಸರಕಾರವನ್ನು ಪದಚ್ಯುತಗೊಳಿಸಿ ಅಧಿಕಾರ ವಶಪಡಿಸಿಕೊಂಡಿದ್ದ ಸೇನಾಡಳಿತ ಮೂರು ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುವ ಮೂಲಕ ಪ್ರಜಾಸತ್ತಾತ್ಮಕ ಆಡಳಿತಕ್ಕೆ ಅವಕಾಶ ನೀಡುವುದಾಗಿ ಹೇಳಿಕೊಂಡಿತ್ತು. ಆದರೆ ಆಂಗ್ ಸಾನ್ ಸೂಕಿ ಅವರ ಪಕ್ಷ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಸ್ಪರ್ಧಿಸದ ಚುನಾವಣೆಯು ಅಧಿಕಾರದಲ್ಲಿ ಮುಂದುವರಿಯಲು ಸೇನಾಡಳಿತ ನಡೆಸಿರುವ ತಂತ್ರವಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.