ಅಮೆರಿಕಾ ಇಲ್ಲದೆ ಯುರೋಪ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ: ನೇಟೊ ಮುಖ್ಯಸ್ಥ ಮಾರ್ಕ್ ರೂಟ್ಟ್
ಮಾರ್ಕ್ ರೂಟ್ಟ್ | Photo Credit : AP \ PTI
ಬ್ರಸೆಲ್ಸ್, ಜ.27: ಅಮೆರಿಕಾ ಇಲ್ಲದೆ ಯುರೋಪ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನೇಟೋ ಮುಖ್ಯಸ್ಥ ಮಾರ್ಕ್ ರೂಟ್ಟ್ ಸೋಮವಾರ ಎಚ್ಚರಿಸಿದ್ದಾರೆ.
ಗ್ರೀನ್‍ಲ್ಯಾಂಡ್ ವಿಷಯದಲ್ಲಿ ಅಮೆರಿಕಾ ಮತ್ತು ಯುರೋಪ್ ನಡುವೆ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಯುರೋಪ್ ಟ್ರಂಪ್ ವಿರುದ್ಧ ಕಠಿಣ ನಿಲುವು ತಳೆಯಬೇಕು ಮತ್ತು ಅಮೆರಿಕಾದ ಮೇಲಿನ ಮಿಲಿಟರಿ ಅವಲಂಬನೆಯನ್ನು ತ್ಯಜಿಸಬೇಕು ಎಂಬ ಆಗ್ರಹ ಹೆಚ್ಚುತ್ತಿದೆ. ಈ ಬಗ್ಗೆ ಯುರೋಪಿಯನ್ ಪಾರ್ಲಿಮೆಂಟ್‍ನಲ್ಲಿ ಪ್ರತಿಕ್ರಿಯಿಸಿದ ಮಾರ್ಕ್ ರೂಟ್ಟ್ `ಯುರೋಪಿಯನ್ ಯೂನಿಯನ್ ಅಥವಾ ಯುರೋಪ್, ಅಮೆರಿಕಾ ಇಲ್ಲದೆ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದು ಎಂದು ಯೋಚಿಸುವವರು ಕನಸು ಕಾಣಲಿ. ಆದರೆ ಇದು ಸಾಧ್ಯವಿಲ್ಲ. ಕಳೆದ ವರ್ಷ ರಕ್ಷಣಾ ವೆಚ್ಚಕ್ಕೆ ನಿಗದಿಪಡಿಸಿದ 5% ಗುರಿಗಿಂತ ನೇಟೋ ದುಪ್ಪಟ್ಟು ವೆಚ್ಚ ಮಾಡಬೇಕಾಗುತ್ತದೆ ಅಂದರೆ 10% ಅನುದಾನ ಮೀಸಲಿಡಬೇಕಾಗುತ್ತದೆ. ಪರಮಾಣು ಶಸ್ತ್ರಾಸ್ತ್ರ ನಿರ್ಮಾಣಕ್ಕೆ ಕೋಟ್ಯಾಂತರ ಹಣ ವೆಚ್ಚ ಮಾಡಬೇಕು. ಇಷ್ಟೇ ಅಲ್ಲ, ನಮ್ಮ ಸ್ವಾತಂತ್ರ್ಯದ ಅಂತಿಮ ಭರವಸೆ, ಅಮೆರಿಕಾ ಪರಮಾಣು ರಕ್ಷಣೆಯನ್ನೂ ಕಳೆದುಕೊಳ್ಳಬೇಕಾಗುತ್ತದೆ' ಎಂದು ಪ್ರತಿಪಾದಿಸಿದ್ದಾರೆ.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಫ್ರಾನ್ಸ್‌ನ ವಿದೇಶಾಂಗ ಸಚಿವ ಜೀನ್-ನೊಯೆಲ್ ಬ್ಯಾರೊಟ್ ` ಯುರೋಪಿಯನ್ನರು ತಮ್ಮ ಸ್ವಂತ ಭದ್ರತೆಯ ಜವಾಬ್ದಾರಿಗೆ ಕ್ರಮ ತೆಗೆದುಕೊಳ್ಳಬಹುದು ಮತ್ತು ತೆಗೆದುಕೊಳ್ಳಲೇಬೇಕು' ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.