×
Ad

ಪ್ಯಾರಿಸ್ ನ ಲೂವ್ರಾ ಮ್ಯೂಸಿಯಂನಿಂದ ನೆಪೋಲಿಯನ್ ಕಾಲಘಟ್ಟದ ಆಭರಣಗಳ ಕಳವು

ಕೇವಲ 7 ನಿಮಿಷಗಳಲ್ಲಿ ಕೈಚಳಕ ತೋರಿಸಿದ ಕಳ್ಳರು

Update: 2025-10-19 19:17 IST

Photo: x

ಪ್ಯಾರಿಸ್: ಮೊನಾಲಿಸಾ ಚಿತ್ರ ಸೇರಿದಂತೆ ವಿಶ್ವದ ಅತ್ಯಂತ ಅಮೂಲ್ಯ ಐತಿಹಾಸಿಕ ಕಲಾಕೃತಿಗಳನ್ನು ಹೊಂದಿರುವ ಪ್ಯಾರಿಸ್ ನಲ್ಲಿನ ಪ್ರಖ್ಯಾತ ಲೂವ್ರಾ ವಸ್ತು ಸಂಗ್ರಹಾಲಯದಿಂದ ನೆಪೋಲಿಯನ್ ಕಾಲಘಟ್ಟದ ಆಭರಣಗಳು ಕಳವಾಗಿರುವ ಹಿನ್ನೆಲೆಯಲ್ಲಿ ಒಂದು ದಿನದ ಮಟ್ಟಿಗೆ ವಸ್ತು ಸಂಗ್ರಹಾಲಯವನ್ನು ಮುಚ್ಚಲಾಗಿದೆ.

“ದರೋಡೆಕೋರರು ಹೈಡ್ರಾಲಿಕ್ ಏಣಿ ಬಳಸಿ ವಸ್ತು ಸಂಗ್ರಹಾಲಯ ಪ್ರವೇಶಿಸಿದ್ದು, ಅಮೂಲ್ಯ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ” ಎಂದು ಫ್ರಾನ್ಸ್ ನ ಆಂತರಿಕ ಭದ್ರತಾ ಸಚಿವ ಲಾರೆಂಟ್ ನೂನೆಝ್ ಹೇಳಿದ್ದಾರೆ. ಇದು ಬಹು ದೊಡ್ಡ ದರೋಡೆಯಾಗಿದೆ ಎಂದೂ ಅವರು ಬಣ್ಣಿಸಿದ್ದಾರೆ.

ಬೆಳಗ್ಗೆ 9.30ರ ಸುಮಾರಿಗೆ ಈ ದರೋಡೆ ಸಂಭವಿಸಿದೆ. ಸಮುದ್ರಾಭಿಮುಖವಾಗಿರುವ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮೂಲಕ ಪ್ರವೇಶಿಸಿರುವ ದರೋಡೆಕೋರರು, ಅಪೊಲೊ ಗ್ಯಾಲರಿಯನ್ನು ತಲುಪಲು ಹೈಡ್ರಾಲಿಕ್ ಏಣಿ ಬಳಸಿದ್ದಾರೆ ಎಂದು ಫ್ರೆಂಚ್ ದೈನಿಕ ‘ಡೈಲಿ ಲೀ ಪ್ಯಾರಿಸಿಯೆನ್’ ವರದಿ ಮಾಡಿದೆ.

ಈ ವೇಳೆ, ಫ್ರೆಂಚ್ ಕಿರೀಟದ ಆಭರಣಗಳ ಸಂಗ್ರಹದ ಪ್ರದರ್ಶನ ನಡೆಯುತ್ತಿತ್ತು ಎಂದು ಹೇಳಲಾಗಿದೆ.

ದರೋಡೆಕೋರರು ಕಿಟಕಿಯ ಗಾಜನ್ನು ಡಿಸ್ಕ್ ಕಟರ್ ನಿಂದ ಕತ್ತರಿಸಿ, ದರೋಡೆ ಮಾಡುವ ಧೈರ್ಯ ಮಾಡುವುದಕ್ಕೂ ಮುನ್ನ, ಜಾಗದ ಪರಿಶೀಲನೆ ನಡೆಸಿರುವ ಸಾಧ್ಯತೆ ಇದೆ ಎಂದು ನೂನೆಝ್ ತಿಳಿಸಿದ್ದಾರೆ. ಈ ಇಡೀ ಕಾರ್ಯಾಚರಣೆ ಕೇವಲ ಏಳು ನಿಮಿಷಗಳಲ್ಲಿ ಮುಕ್ತಾಯಗೊಂಡಿದೆ ಎಂದೂ ಅವರು ಹೇಳಿದ್ದಾರೆ.

‘ಲೀ ಪ್ಯಾರಿಸಿಯನ್’ ವರದಿಯ ಪ್ರಕಾರ, ನೆಪೋಲಿಯನ್ ಹಾಗೂ ಮಹಾರಾಣಿಯ ಒಂಭತ್ತು ಆಭರಣಗಳ ಸಂಗ್ರಹದೊಂದಿಗೆ ದರೋಡೆಕೋರರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಕಳವಾದ ಆಭರಣಗಳ ಪೈಕಿ ಒಂದು ಆಭರಣ ವಸ್ತು ಸಂಗ್ರಹಾಲಯದ ಹೊರಗೆ ದೊರೆತಿದೆ ಎಂದೂ ಅದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News