×
Ad

ಸೂರ್ಯನಿಗಿಂತ ಹಳೆಯದಾದ ವಸ್ತು ಕ್ಷುದ್ರಗ್ರಹದಲ್ಲಿ ಪತ್ತೆ: ನಾಸಾ

Update: 2025-08-24 22:18 IST

PC :  @NASA

ವಾಷಿಂಗ್ಟನ್, ಆ.24: ಭೂಮಿಯಿಂದ 30.22 ಕೋಟಿ ಕಿ.ಮೀ ದೂರದಲ್ಲಿರುವ ಬೆನು ಕ್ಷುದ್ರಗ್ರಹದಿಂದ ಸಂಗ್ರಹಿಸಿದ ಕಲ್ಲು ಮತ್ತು ಧೂಳಿನ ಮಾದರಿಗಳಲ್ಲಿ ಸೂರ್ಯನಿಗಿಂತಲೂ ಹಿಂದಿನ ಅವಧಿಯ ವಸ್ತುಗಳನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ `ನಾಸಾ'ದ ವಿಜ್ಞಾನಿಗಳು ಪತ್ತೆಹಚ್ಚಿದ್ದು ಇದು ಆರಂಭಿಕ ಸೌರಮಂಡಲ ಮತ್ತು ಜೀವನದ ಮೂಲಗಳ ಬಗ್ಗೆ ಪ್ರಮುಖ ಸುಳಿವನ್ನು ನೀಡಿದೆ.

ವಿಜ್ಞಾನಿಗಳು `ಬೆನು'ವಿನ ಸ್ಯಾಂಪಲ್‍ನಲ್ಲಿ ನಮ್ಮ ಸೌರವ್ಯವಸ್ಥೆಗೂ ಹಿಂದಿನ ಧಾನ್ಯಗಳನ್ನು ಗುರುತಿಸಿದ್ದಾರೆ. ನಕ್ಷತ್ರ ಧೂಳು ಎಂದು ಕರೆಯಲ್ಪಡುವ ಈ ಕಣಗಳು ಶತಕೋಟಿ ವರ್ಷಗಳ ಹಿಂದೆ ( ಸೂರ್ಯನ ಜನನಕ್ಕಿಂತ ಮೊದಲು ) ಸಾಯುತ್ತಿರುವ ನಕ್ಷತ್ರಗಳ ಸುತ್ತಲೂ ರೂಪುಗೊಂಡಿದ್ದು ಬಹುತೇಕ ಬದಲಾಗದೆ ಉಳಿದಿದೆ. ಈ ಕಣಗಳು ನಮ್ಮ ಸೌರವ್ಯೂಹದ ಆರಂಭದ ಬಗ್ಗೆ ಭೂಮಿಯ ಮೇಲೆ ಕಂಡುಬರುವ ಉಲ್ಕೆಗಳಿಗಿಂತ ನಿಖರವಾದ ನೋಟವನ್ನು ನೀಡುತ್ತದೆ ಎಂದು ಲಂಡನ್‍ ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಮತ್ತು ಅರಿಝೋನಾ ವಿವಿಯ ತಜ್ಞರನ್ನೊಳಗೊಂಡ ಅಂತರಾಷ್ಟ್ರೀಯ ತಂಡವು ತೀರ್ಮಾನಿಸಿದೆ.

`ಬೆನು' ಕ್ಷುದ್ರಗ್ರಹದಿಂದ ಸಂಗ್ರಹಿಸಿದ ಮಾದರಿಯು ಬಾಹ್ಯ ಸೌರಮಂಡಲದ ಸಾವಯವ ವಸ್ತುಗಳು, ಅಂತರ್‍ತಾರಾ ಅನಿಲ ಮತ್ತು ಧೂಳು ಹಾಗೂ ಹೊರಕ್ಕೆ ಚಲಿಸುವ ಮುನ್ನ ಸೂರ್ಯನ ಬಳಿ ರೂಪುಗೊಂಡ ಹೆಚ್ಚಿನ ತಾಪಮಾನದ ಕಣಗಳು ಸೇರಿದಂತೆ ವೈವಿಧ್ಯಮಯ ಶ್ರೇಣಿಯ ವಸ್ತುಗಳನ್ನು ಒಳಗೊಂಡಿದೆ ಎಂದು ತಜ್ಞರ ತಂಡವನ್ನು ಉಲ್ಲೇಖಿಸಿದ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News