×
Ad

ರಶ್ಯದೊಂದಿಗೆ ಆರ್ಥಿಕ ಸಂಬಂಧ ಮುಂದುವರಿಸಿದರೆ ತೀವ್ರ ಹೆಚ್ಚುವರಿ ನಿರ್ಬಂಧ: ಭಾರತ, ಚೀನಾಕ್ಕೆ ನೇಟೊ ಮುಖ್ಯಸ್ಥರ ಎಚ್ಚರಿಕೆ

Update: 2025-07-16 21:39 IST

ಮಾರ್ಕ್ ರೂಟ್ | PC : nato.int

ಬ್ರಸೆಲ್ಸ್, ಜು.16: ಬ್ರೆಝಿಲ್, ಚೀನಾ, ಭಾರತ ಮುಂತಾದ ದೇಶಗಳು ರಶ್ಯದೊಂದಿಗೆ ಆರ್ಥಿಕ ಸಂಬಂಧವನ್ನು ಮುಂದುವರಿಸಿದರೆ ತೀವ್ರ ಮಾಧ್ಯಮಿಕ (ದ್ವಿತೀಯ) ನಿರ್ಬಂಧ ಎದುರಿಸಬೇಕಾಗುತ್ತದೆ ಎಂದು ನೇಟೊದ ಪ್ರಧಾನ ಕಾರ್ಯದರ್ಶಿ ಮಾರ್ಕ್ ರೂಟ್ ಬುಧವಾರ ಎಚ್ಚರಿಕೆ ನೀಡಿದ್ದಾರೆ.

ಉಕ್ರೇನ್‌ ಗೆ ಶಸ್ತ್ರಾಸ್ತ್ರ ನೆರವಿನ ಹೊಸ ಪ್ಯಾಕೇಜನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿ, 50 ದಿನದೊಳಗೆ ರಶ್ಯವು ಉಕ್ರೇನ್‍ ನೊಂದಿಗೆ ಕದನ ವಿರಾಮ ಒಪ್ಪಂದ ಮಾಡಿಕೊಳ್ಳದಿದ್ದರೆ ರಶ್ಯದ ಸರಕುಗಳನ್ನು ಖರೀದಿಸುವ ದೇಶಗಳ ವಿರುದ್ಧ 100% ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ರೂಟ್ ಈ ಹೇಳಿಕೆ ನೀಡಿದ್ದಾರೆ.

`ಬ್ರೆಝಿಲ್, ಚೀನಾ ಮತ್ತು ಭಾರತ ದೇಶಗಳಿಗೆ ನನ್ನ ಸಲಹೆಯೆಂದರೆ, ದಯವಿಟ್ಟು ವ್ಲಾದಿಮಿರ್ ಪುಟಿನ್‌ ಗೆ ಕರೆ ಮಾಡಿ ಮಾತನಾಡಿ. ಶಾಂತಿ ಮಾತುಕತೆಯ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ತಿಳಿಸಿ. ಯಾಕೆಂದರೆ ರಶ್ಯ ಶಾಂತಿ ಮಾತುಕತೆಗೆ ಮುಂದಾಗದಿದ್ದರೆ ನಿಮಗೆ ಹೆಚ್ಚಿನ ಹೊಡೆತ ಬೀಳಬಹುದು' ಎಂದು ರೂಟ್ ಹೇಳಿದ್ದಾರೆ.

ಉಕ್ರೇನ್ ಅನ್ನು ಮಾತುಕತೆಗೆ ಬಲಿಷ್ಠ ರೀತಿಯಲ್ಲಿ ಸಜ್ಜುಗೊಳಿಸಲು ಯುರೋಪ್ ಆರ್ಥಿಕ ನೆರವನ್ನು ಒದಗಿಸಲಿದೆ. ಅಮೆರಿಕದೊಂದಿಗಿನ ಹೊಸ ಒಪ್ಪಂದದ ಪ್ರಕಾರ ಉಕ್ರೇನ್‌ ಗೆ ಅಮೆರಿಕವು ಇನ್ನು ಮುಂದೆ ಬೃಹತ್ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಒದಗಿಸಲಿದೆ. ರಕ್ಷಣೆಗಾಗಿ ಮಾತ್ರವಲ್ಲ, ದಾಳಿ ನಡೆಸಲು ಕ್ಷಿಪಣಿಗಳನ್ನೂ ಒದಗಿಸುತ್ತದೆ ಎಂದು ರೂಟ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಇದರಲ್ಲಿ ದೀರ್ಘ ವ್ಯಾಪ್ತಿಯ ಕ್ಷಿಪಣಿಗಳೂ ಸೇರಿರುತ್ತವೆಯೇ ಎಂಬ ಸುದ್ಧಿಗಾರರ ಪ್ರಶ್ನೆಗೆ ` ಎಲ್ಲಾ ರೀತಿಯ ಶಸ್ತ್ರಾಸ್ತ್ರಗಳೂ ಇರಲಿವೆ. ಆದರೆ ಈ ಬಗ್ಗೆ ಟ್ರಂಪ್ ಬಗ್ಗೆ ವಿವರವಾದ ಚರ್ಚೆ ನಡೆಸಿಲ್ಲ' ಎಂದು ರೂಟ್ ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News