ನೇಪಾಳ ಪ್ರತಿಭಟನೆ|ಕಠ್ಮಂಡು ವಿಮಾನ ನಿಲ್ದಾಣವನ್ನು ವಶಕ್ಕೆ ಪಡೆದ ನೇಪಾಳ ಸೇನೆ
Update: 2025-09-10 11:44 IST
Photo credit: PTI
ಕಠ್ಮಂಡು: ನೇಪಾಳದಲ್ಲಿ ಪ್ರತಿಭಟನೆಗಳು ತೀವ್ರ ಸ್ವರೂಪಕ್ಕೆ ತಿರುಗಿದ ಬೆನ್ನಲ್ಲೇ, ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸೇನೆ ತನ್ನ ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ.
ನೇಪಾಳದ ರಾಜಧಾನಿ ಕಠ್ಮಂಡು ಸೇರಿದಂತೆ ಹಲವೆಡೆ ಬುಧವಾರ ಕೂಡಾ ಪ್ರತಿಭಟನೆಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸದಿಲ್ಲಿ ಮತ್ತು ಕಠ್ಮಂಡು ನಡುವೆ ಪ್ರತಿನಿತ್ಯ ಆರು ವಿಮಾನಗಳನ್ನು ಕಾರ್ಯಾಚರಿಸುತ್ತಿದ್ದ ಏರ್ ಇಂಡಿಯಾ, ನಾಲ್ಕು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ಇಂಡಿಗೊ ಹಾಗೂ ನೇಪಾಳ ಏರ್ ಲೈನ್ಸ್ ವಿಮಾನ ಯಾನ ಸಂಸ್ಥೆಗಳೂ ಕೂಡಾ ತಮ್ಮ ವಿಮಾನ ಕಾರ್ಯಾಚರಣೆಯನ್ನು ರದ್ದುಗೊಳಿಸಿವೆ.
ಪ್ರತಿಭಟನಾಕಾರರು ರಾಜಕೀಯ ನಾಯಕರ ಮನೆಗಳನ್ನು ಸುಟ್ಟು ಹಾಕಿದ ಬೆನ್ನಲ್ಲೇ ಸೇನೆಯು ಸರಕಾರದ ಮುಖ್ಯ ಸಚಿವಾಲಯ ಕಟ್ಟಡವಾದ ಸಿಂಗ್ದರ್ಬಾರ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ.