ನೇಪಾಳ : ಭಾರತೀಯರಿದ್ದ ಬಸ್ಸಿನ ಮೇಲೆ ದಾಳಿ; ಹಲವರಿಗೆ ಗಾಯ
PC: TOI
ಲಕ್ನೋ: ನೇಪಾಳದಲ್ಲಿ ವ್ಯಾಪಕ ಹಿಂಸಾಚಾರ ಮುಂದುವರಿದಿರುವ ನಡುವೆಯೇ, ಕಠ್ಮಂಡು ಸಮೀಪ ಗುರುವಾರ ಬೆಳಿಗ್ಗೆ ಆಂಧ್ರಪ್ರದೇಶದಿಂದ ತೆರಳಿದ್ದ ಯಾತ್ರಾರ್ಥಿಗಳಿದ್ದ ಬಸ್ಸಿನ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ ಹಿನ್ನೆಲೆಯಲ್ಲಿ ತೀರ್ಥಯಾತ್ರಿಗಳ ಗುಂಪು ಆತಂಕದ ಕ್ಷಣಗಳನ್ನು ಎದುರಿಸಬೇಕಾಯಿತು. ಪ್ರವಾಸಿಗರ ವಸ್ತುಗಳನ್ನು ಲೂಟಿ ಮಾಡಿದ ದಾಳೀಕೋರರು ಹಲವು ಮಂದಿಯನ್ನು ಗಾಯಗೊಳಿಸಿದ್ದಾರೆ.
ತೀರ್ಥಯಾತ್ರಿಗಳ ಗುಂಪು ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಿ ಉತ್ತರ ಪ್ರದೇಶದ ನೋಂದಣಿ ಹೊಂದಿದ್ದ ಬಸ್ಸಿನಲ್ಲಿ ವಾಪಸ್ಸಾಗುತ್ತಿದ್ದಾಗ ಈ ದಾಳಿ ನಡೆದಿದೆ. ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಿದ ದಾಳಿಕೋರರು, ಪ್ರಯಾಣಿಕರ ಬ್ಯಾಗ್ ಗಳಲ್ಲಿದ್ದ ನಗದು ಮತ್ತು ಮೊಬೈಲ್ ಫೋನ್ ಗಳನ್ನು ಲೂಟಿ ಮಾಡಿದರು. "ಘಟನೆಯಲ್ಲಿ ಏಳೆಂಟು ಮಂದಿಗೆ ಗಾಯಗಳಾಗಿದ್ದು, ಈ ಹಂತದಲ್ಲಿ ನೇಪಾಳಿ ಸೇನೆ ಯಾತ್ರಿಗಳ ನೆರವಿಗೆ ಬಂತು. ಬಳಿಕ ಘಟನೆಯಲ್ಲಿ ಸಿಲುಕಿಕೊಂಡ ಎಲ್ಲರನ್ನೂ ಭಾರತ ಸರ್ಕಾರ ಕಠ್ಮಂಡುವಿನಿಂದ ದೆಹಲಿಗೆ ವಿಮಾನದಲ್ಲಿ ಕರೆ ತಂದಿದೆ" ಎಂದು ಬಸ್ಸಿನ ಸಿಬ್ಬಂದಿ ಶ್ಯಾಮು ನಿಶಾದ್ ಹೇಳಿದ್ದಾರೆ. ಹಾನಿಗೀಡಾದ ಬಸ್ಸನ್ನು ಉತ್ತರ ಪ್ರದೇಶದ ಗಡಿಭಾಗ ಮಹಾರಾಜ್ ಗಂಜ್‌ಗೆ ಸಂಜೆ ವೇಳೆಗೆ ತರಲಾಗಿದೆ ಎಂದು ಮೂಲಗಳು ವಿವರಿಸಿವೆ.
ಆಂಧ್ರ ಮೂಲದ ಬಸ್ಸಿನ ಚಾಲಕ ರಾಜ್ ಭಯಾನಕ ಘಟನೆಯನ್ನು ನೆನಪಿಸಿಕೊಂಡು, "ಭಾರತಕ್ಕೆ ವಾಪಸ್ಸಾಗುತ್ತಿದ್ದ ವೇಳೆ ದೊಡ್ಡ ಗುಂಪು ದಾಳಿ ಮಾಡಿತು. ಕಲ್ಲುಗಳಿಂದ ಕಿಟಕಿ ಗಾಜುಗಳನ್ನು ಒಡೆದ ದಾಳಿಕೋರರು ನಮ್ಮ ಎಲ್ಲ ವಸ್ತುಗಳನ್ನು ಲೂಟಿ ಮಾಡಿದರು" ಎಂದು ವಿವರಿಸಿದರು.
ಘಟನೆ ಹಿನ್ನೆಲೆಯಲ್ಲಿ ಭಾರತೀಯ ಅಧಿಕಾರಿಗಳು ಉತ್ತರ ಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳ ಗಡಿಯಲ್ಲಿ ಬಿಗಿ ಬಂದೋಬಸ್ತ್ ಆಯೋಜಿಸಿದ್ದಾರೆ.