×
Ad

ನೇಪಾಳದ ಪ್ರಜೆಗಳನ್ನು ಸೇನೆಗೆ ಸೇರಿಸಿಕೊಳ್ಳದಂತೆ ರಶ್ಯಕ್ಕೆ ಆಗ್ರಹ

Update: 2023-12-05 23:03 IST

Photo: PTI/AP | ಸಾಂದರ್ಭಿಕ ಚಿತ್ರ

ಕಠ್ಮಂಡು: ತನ್ನ ಪ್ರಜೆಗಳನ್ನು ಸೇನೆಗೆ ನೇಮಕಾತಿ ಮಾಡಬಾರದು ಮತ್ತು ಈಗಾಗಲೇ ನೇಮಕಗೊಂಡ ನೇಪಾಳಿ ಪ್ರಜೆಗಳನ್ನು ತಕ್ಷಣ ಸ್ವದೇಶಕ್ಕೆ ವಾಪಾಸು ಕಳುಹಿಸಬೇಕು ಎಂದು ನೇಪಾಳ ಸರಕಾರ ರಶ್ಯವನ್ನು ಮಂಗಳವಾರ ಆಗ್ರಹಿಸಿದೆ.

ರಶ್ಯದ ಸೇನೆಯಲ್ಲಿ ನೇಮಕಗೊಂಡಿದ್ದ 6 ನೇಪಾಳಿ ಯೋಧರು ಉಕ್ರೇನ್ ಯುದ್ಧದಲ್ಲಿ ಮೃತಪಟ್ಟಿರುವ ವರದಿಯ ಹಿನ್ನೆಲೆಯಲ್ಲಿ ನೇಪಾಳ ಈ ಒತ್ತಾಯ ಮಾಡಿದೆ. ‘ಮೃತದೇಹಗಳನ್ನು ತಕ್ಷಣ ಸ್ವದೇಶಕ್ಕೆ ಕಳುಹಿಸುವಂತೆ ಮತ್ತು ಮೃತ ಯೋಧರ ಕುಟುಂಬದವರಿಗೆ ಪರಿಹಾರ ನೀಡುವಂತೆ ರಶ್ಯವನ್ನು ಆಗ್ರಹಿಸಲಾಗಿದೆ. ರಶ್ಯ ಸೇನೆಗೆ ನೇಮಕಗೊಂಡಿದ್ದ ನೇಪಾಳಿ ಯೋಧನೊಬ್ಬನನ್ನು ಉಕ್ರೇನ್ ಸೇನೆ ಸೆರೆಹಿಡಿದಿದ್ದು ಆತನ ಬಿಡುಗಡೆಗೆ ರಾಜತಾಂತ್ರಿಕ ಪ್ರಯತ್ನ ಮುಂದುವರಿದಿದೆ’ ಎಂದು ನೇಪಾಳದ ವಿದೇಶಾಂಗ ಇಲಾಖೆ ಹೇಳಿದೆ. ಸುಮಾರು 200 ನೇಪಾಳೀಯರು ರಶ್ಯ ಸೇನೆಯಲ್ಲಿ ಬಾಡಿಗೆ ಸಿಪಾಯಿಗಳಾಗಿ ನೇಮಕಗೊಂಡಿರುವುದಾಗಿ ರಶ್ಯಕ್ಕೆ ನೇಪಾಳದ ರಾಯಭಾರಿ ರಾಜ್ ತುಲಾಧಾರ್‌ರನ್ನು ಉಲ್ಲೇಖಿಸಿ ‘ದಿ ಕಠ್ಮಂಡು ಪೋಸ್ಟ್’ ವರದಿ ಮಾಡಿದೆ.

ಗೂರ್ಖರೆಂದು ಕರೆಯಲ್ಪಡುವ ನೇಪಾಳದ ಯೋಧರು ಶೌರ್ಯ ಮತ್ತು ಹೋರಾಟದ ಕೌಶಲ್ಯಗಳಿಗೆ ಹೆಸರಾಗಿದ್ದು 1947ರಲ್ಲಿ ಭಾರತ-ನೇಪಾಳ ಮತ್ತು ಬ್ರಿಟನ್ ನಡುವೆ ಸಹಿ ಹಾಕಲಾದ ಒಪ್ಪಂದದಂತೆ ಭಾರತ ಮತ್ತು ಬ್ರಿಟನ್ ಸೇನೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ರಶ್ಯದ ಜತೆ ಈ ರೀತಿಯ ಒಪ್ಪಂದ ಏರ್ಪಟ್ಟಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News