ನೇಪಾಳ: ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪ್ರಧಾನಿ ಕೆ.ಪಿ.ಶರ್ಮಾ ಓಲಿ ರಾಜೀನಾಮೆ
ಕಠ್ಮಂಡು : ನೇಪಾಳ ಸರಕಾರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರಿದ ಹಿನ್ನಲೆ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ .
ನೇಪಾಳದಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವನ್ನು ತೆರವುಗೊಳಿಸಿದರೂ ಪ್ರತಿಭಟನೆ ಮುಂದುವರಿದಿತ್ತು. ಓಲಿ ಅವರ ರಾಜೀನಾಮೆಗೆ ಪ್ರತಿಭಟನಾಕಾರರು ಒತ್ತಾಯಿಸಿದ್ದರು.
ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಅವರ ಸಹಾಯಕ ಪ್ರಕಾಶ್ ಸಿಲ್ವಾಲ್ ದೃಢಪಡಿಸಿದ್ದಾರೆ.
ಸರ್ಕಾರವು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ವಿಧಿಸಿದ್ದ ನಿಷೇಧವನ್ನು ಹಿಂಪಡೆಯಲಾಗಿದೆ ಎಂದು ಘೋಷಿಸಿದ್ದರೂ, ಪ್ರತಿಭಟನೆಗಳು ಎರಡನೇ ದಿನವೂ ತೀವ್ರವಾಗಿ ನಡೆಯುತ್ತಿವೆ. ಸೋಮವಾರದ ಪ್ರತಿಭಟನೆಗಳಲ್ಲಿ 20 ಮಂದಿ ಸಾವನ್ನಪ್ಪಿ, 250 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ರಾಜೀನಾಮೆ ನೀಡುವ ಕೆಲವೇ ಗಂಟೆಗಳ ಮೊದಲು ಪ್ರತಿಭಟನಾಕಾರರು ಶಾಂತಿ ಕಾಯ್ದುಕೊಳ್ಳುವಂತೆ ಮತ್ತು ಸಂಯಮದಿಂದ ವರ್ತಿಸುವಂತೆ ಓಲಿ ಮನವಿ ಮಾಡಿದ್ದರು. ಸಂವಾದದ ಮೂಲಕ ಪರಿಹಾರಗಳನ್ನು ಕಂಡುಕೊಳ್ಳುವಂತೆ ಕರೆ ನೀಡಿದ್ದರು. ಬಿಕ್ಕಟ್ಟನ್ನು ಪರಿಹರಿಸಲು ಸಂಜೆ 6 ಗಂಟೆಗೆ ಸರ್ವಪಕ್ಷ ಸಭೆಯನ್ನು ಕೂಡ ನಿಗದಿಪಡಿಸಿದ್ದರು.
ಸೇನಾ ಮೂಲಗಳ ಪ್ರಕಾರ, ಓಲಿ ಅವರು ನೇಪಾಳ ಸೇನಾ ಮುಖ್ಯಸ್ಥ ಜನರಲ್ ಅಶೋಕ್ ರಾಜ್ ಸಿಗ್ಡೆಲ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಪರಿಸ್ಥಿತಿ ಹದಗೆಡುತ್ತಿರುವುದನ್ನು ನಿಯಂತ್ರಿಸಲು ಮತ್ತು ಪ್ರಧಾನಿ ನಿವಾಸದಿಂದ ಸುರಕ್ಷಿತವಾಗಿ ಹೊರಬರಲು ಮಿಲಿಟರಿ ಸಹಾಯವನ್ನು ಕೋರಿದ್ದರು. ಈ ವೇಳೆ ಸೇನಾ ಮುಖ್ಯಸ್ಥರು ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು ಎಂದು ವರದಿಯಾಗಿದೆ.