ನೇಪಾಳ ಹಿಂಸಾಚಾರ: ಓರ್ವ ಭಾರತೀಯನ ಸಹಿತ 51 ಮಂದಿ ಮೃತ್ಯು
PC: x.com/Reuters
ಕಠ್ಮಂಡು: ಹಿಮಾಲಯನ್ ರಾಷ್ಟ್ರವಾದ ನೇಪಾಳದಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆ ವೇಳೆ ಸಂಭವಿಸಿದ ವ್ಯಾಪಕ ಹಿಂಸಾಚಾರದಲ್ಲಿ ಭಾರತೀಯ ಪ್ರಜೆ, ಮೂವರು ಪೊಲೀಸರು ಸೇರಿದಂತೆ ಒಟ್ಟು 51 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಪ್ರಕಟಿಸಿದ್ದಾರೆ.
"ಮೃತಪಟ್ಟವರಲ್ಲಿ 21 ಮಂದಿ ಪ್ರತಿಭಟನಾಕಾರರು, ಜೈಲಿನಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ ಒಂಬತ್ತು ಮಂದಿ ಕೈದಿಗಳು, ಮೂವರು ಪೊಲೀಸರು ಹಾಗೂ ಇತರ 18 ಮಂದಿ ಸೇರಿದ್ದಾರೆ" ಎಂದು ನೇಪಾಳ ಪೊಲೀಸ್ ಸಹ ವಕ್ತಾರ ರಮೇಶ್ ಥಾಪಾ ಹೇಳಿದ್ದಾರೆ. ಆದರೆ ಮೃತಪಟ್ಟವರ ವಿವರಗಳನ್ನು ನೀಡಿಲ್ಲ.
ಮೃತ ಭಾರತೀಯನನ್ನು ಉತ್ತರಪ್ರದೇಶದ ಗಾಜಿಯಾಬಾದ್ನ ಸಾರಿಗೆ ಉದ್ಯಮಿ ರಾಮವೀರ್ ಗೋಲಾ ಅವರ ಜತೆ ನೇಪಾಳಕ್ಕೆ ಆಗಮಿಸಿದ್ದ ರಾಜೇಶ್ ಗೋಲಾ (51) ಎಂದು ಗುರುತಿಸಲಾಗಿದೆ. ಅವರು ತಂಗಿದ್ದ ಕಠ್ಮಂಡುವಿನ ಐಷಾರಾಮಿ ಹೋಟೆಲ್ಗೆ ಸೆಪ್ಟೆಂಬರ್ 9ರಂದು ರಾತ್ರಿ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದರು. ನಾಲ್ಕನೇ ಮಹಡಿಯ ಕೊಠಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಅವರು, ಬೆಡ್ಶೀಟ್ಗಳ ಸಹಾಯದಿಂದ ಕಿಟಕಿ ಮೂಲಕ ಇಳಿಯುವ ಪ್ರಯತ್ನದಲ್ಲಿದ್ದಾಗ ಜಾರಿ ನೆಲಮಹಡಿಗೆ ಬಿದ್ದು ಮೃತಪಟ್ಟಿದ್ದರು.
"ಒಟ್ಟು 36 ಶವಗಳನ್ನು ತ್ರಿಭುವನ್ ಯುನಿವರ್ಸಿಟಿ ಬೋಧನಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮಹಾರಾಜ್ಗಂಜ್ನ ಈ ಆಸ್ಪತ್ರೆಯಲ್ಲಿ ಶುಕ್ರವಾರ ಮರಣೋತ್ತರ ಪರೀಕ್ಷೆಗಳು ಆರಂಭವಾಗಿವೆ. ಹಿಂಸಾಚಾರದಲ್ಲಿ 1500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಈ ಪೈಕಿ 1000 ಮಂದಿ ಚಿಕಿತ್ಸೆ ಪಡೆದು ಮನೆಗಳಿಗೆ ಮರಳಿದ್ದಾರೆ" ಎಂದು ಥಾಪಾ ವಿವರಿಸಿದ್ದಾರೆ. ಗುರುವಾರ ಹಾಗೂ ಶುಕ್ರವಾರ ದೇಶದ ವಿವಿಧೆಡೆಗಳಲ್ಲಿ 17 ಶವಗಳು ಸಿಕ್ಕಿವೆ ಎಂದು ತಿಳಿಸಿದ್ದಾರೆ.