×
Ad

ಭಾರತದ ಜೊತೆ ನಿಕಟ ಸಂಬಂಧ ಹೊಂದಿರುವ ನೇಪಾಳ ಪ್ರಧಾನಿ

Update: 2025-09-13 08:23 IST

ಸುಶೀಲಾ ಕರ್ಕಿ PC: x.com/AJEnglish

ವಾರಾಣಾಸಿ: ನೇಪಾಳದ ಪ್ರಪ್ರಥಮ ಮಹಿಳಾ ಪ್ರಧಾನಿ ಸುಶೀಲಾ ಕರ್ಕಿ, ಭಾರತದ ಜತೆ ನಿಕಟ ನಂಟು ಹೊಂದಿದ್ದು, 1975ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ (ಬಿಎಚ್ಯು) ದಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಪತಿ ದುರ್ಗಾಪ್ರಸಾದ್ ಸುಬೇದಿ ಕೂಡಾ ಇದೇ ವಿವಿಯಲ್ಲಿ ಅಧ್ಯಯನ ಮಾಡಿದ್ದರು.

ಕರ್ಕಿ (73) ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ ಬಿಎಚ್ಯು ನಿವೃತ್ತ ಪ್ರೊ. ದೀಪಕ್ ಮಲಿಕ್, "ಬಿಎಚ್ ಯುನಲ್ಲಿ ಆಕೆ ಇದ್ದಾಗಿನಿಂದಲೂ ನಮ್ಮ ಜತೆ ಸೌಹಾರ್ದ ಸಂಬಂಧ ಹೊಂದಿದ್ದಾರೆ. ತಟಸ್ಥ, ಪ್ರಾಮಾಣಿಕ ವ್ಯಕ್ತಿಯೊಬ್ಬರು ದೇಶವನ್ನು ಮುನ್ನಡೆಸುತ್ತಿರುವುದು ಅತೀವ ಸಂತಸ ತಂದಿದೆ" ಎಂದು ಬಣ್ಣಿಸಿದ್ದಾರೆ.

"ನಾನು ನೇಪಾಳಕ್ಕೆ ಹೋದಾಗಲೆಲ್ಲ ಆಕೆಯನ್ನು ಭೇಟಿ ಮಾಡುವುದು ಮರೆಯುತ್ತಿರಲಿಲ್ಲ" ಎಂದು 2024ರ ನವೆಂಬರ್ ನಲ್ಲಿ ಕೊನೆಯ ಬಾರಿ ನೇಪಾಳಕ್ಕೆ ಭೇಟಿ ನೀಡಿದ್ದ ಅವರು ಹೇಳಿದರು. ನಿಷ್ಠೆ, ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಮತ್ತು ರಾಜಕೀಯ ತಟಸ್ಥ ನೀತಿಯನ್ನು ಹೊಂದಿದ್ದ ಕರ್ಕಿ, ಭ್ರಷ್ಟ ಅಧಿಕಾರಿಗಳ ವಿರುದ್ಧ ಐತಿಹಾಸಿಕ ತೀರ್ಪುಗಳನ್ನು ನೀಡಿ ವ್ಯಾಪಕ ಗೌರವ ಸಂಪಾದಿಸಿದ್ದರು ಎಂದು ಅವರು ವಿವರಿಸಿದ್ದಾರೆ.

ವಿಮಾನ ಅಪಹರಿಸಿದ್ದ ಕರ್ಕಿ ಪತಿ!

ನೇಪಾಳದ ಮಧ್ಯಂತರ ಪ್ರಧಾನಿ ಸುಶೀಲಾ ಕರ್ಕಿ ಅವರ ಪತಿ ದುರ್ಗಾಪ್ರಸಾದ್ ಸುಬೇದಿ ನೇಪಾಳದ ಮೊದಲ ಅಪಹರಣ ಪ್ರಕರಣದಲ್ಲಿ ಗುರುತಿಸಿಕೊಂಡ ವ್ಯಕ್ತಿ. ಬಾಲಿವುಡ್ ತಾರೆ ಮಾಲಾ ಸಿನ್ಹಾ ಸೇರಿದಂತೆ ಹಲವು ಮಂದಿ ಪ್ರಯಾಣಿಕರಿದ್ದ ರಾಯಲ್ ನೇಪಾಳ ಏರ್ಲೈನ್ಸ್ ಡೆ ಹವಿಲ್ ಲ್ಯಾಂಡ್ ಡಿಎಚ್‌ಡಿ-6 ಟ್ವಿನ್ ಒಟ್ಟೇರ್ ವಿಮಾನವನ್ನು 1973ರಲ್ಲಿ ಅಪಹರಣ ಮಾಡಿದ್ದ ಮೂವರಲ್ಲಿ ಸುಬೇದಿ ಕೂಡಾ ಒಬ್ಬರು.

ದುರ್ಗಾಪ್ರಸಾದ್ ಅವರು ರಾಜಪ್ರಭುತ್ವದ ವಿರುದ್ಧದ ದಂಗೆಗೆ ಹಣ ಕ್ರೋಢೀಕರಿಸುವ ಸಲುವಾಗಿ ನಾಗೇಂದ್ರ ಧುಂಗೆಲ್ ಮತ್ತು ಬಸಂತ ಭಟ್ಟಾರಾಯ್ ಜತೆ ಸೇರಿ ವಿಮಾನ ಅಪಹರಣದ ಸಾಹಸಕ್ಕೆ ಕೈಹಾಕಿದ್ದರು. ನೇಪಾಳದ ಬಿರಾಟ್ ನಗರಕ್ಕೆ ಸಮೀಪದ ಬಿಹಾರಕ್ಕೆ ಸೇರಿದ ಫೋರ್ಬೆಸ್ ಗಂಜ್ ನಲ್ಲಿ ವಿಮಾನ ಇಳಿಯುವಂತೆ ಪೈಲಟ್ ಗೆ ಸೂಚಿಸಿದ್ದ ಅಪಹರಣಕಾರರು, ವಿಮಾನದಲ್ಲಿ ಕಠ್ಮಂಡುವಿಗೆ ಸಾಗಿಸುತ್ತಿದ್ದ ನೇಪಾಳ ಬ್ಯಾಂಕಿಗೆ ಸೇರಿದ್ದು ಎನ್ನಲಾದ ಅಪಾರ ಮೊತ್ತವನ್ನು ಕಸಿದುಕೊಂಡು ದಟ್ಟ ಕಾಡಿಗೆ ಪಲಾಯನ ಮಾಡಿ ತಪ್ಪಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News