ಇಸ್ರೇಲ್ | ನೆತನ್ಯಾಹು ಸರ್ಕಾರಕ್ಕೆ ಭಾರೀ ಹೊಡೆತ; ಒಕ್ಕೂಟದಿಂದ ಹೊರನಡೆದ ಪ್ರಮುಖ ಮಿತ್ರಪಕ್ಷ
ಬೆಂಜಮಿನ್ ನೆತನ್ಯಾಹು | PC : PTI
ಟೆಲ್ ಅವಿವ್ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಾಯಕತ್ವದ ಬಲಪಂಥೀಯ ಒಕ್ಕೂಟದಿಂದ ಮಿತ್ರಪಕ್ಷವೊಂದು ಹೊರನಡೆದಿದ್ದು, ಸರಕಾರಕ್ಕೆ ಭಾರಿ ಹೊಡೆತ ನೀಡಿದ ಘಟನೆ ಬುಧವಾರ ನಡೆದಿದೆ. "ಶಾಸ್" ಅಲ್ಟ್ರಾ-ಆರ್ಥೊಡಾಕ್ಸ್ ಪಕ್ಷದ ನಾಯಕರು ಸರ್ಕಾರದಿಂದ ಹೊರಬರುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ನೆತನ್ಯಾಹು ಸರ್ಕಾರವು ಸಂಸತ್ತಿನಲ್ಲಿ ಅಲ್ಪಮತಕ್ಕೆ ಇಳಿದಿದೆ ಎಂದು AP ಸುದ್ದಿ ಸಂಸ್ಥೆ ವರದಿ ಮಾಡಿದೆ.
ಶಾಸ್ ಪಕ್ಷದ ನಿರ್ಧಾರವು ಇಸ್ರೇಲ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಶಾಸ್ ಪಕ್ಷದ ಘಟಕಗಳಿಗೆ ನೀಡಬೇಕಾದ ಮಿಲಿಟರಿ ಕರಡು ವಿನಾಯಿತಿಗಳ ಕುರಿತು ಉಂಟಾದ ಭಿನ್ನಾಭಿಪ್ರಾಯದಿಂದ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಈ ವಾರದ ಆರಂಭದಲ್ಲಿ ಇನ್ನೊಂದು ಬಹು ಸಂಪ್ರದಾಯವಾದಿ ಪಕ್ಷವೂ ಸರ್ಕಾರದಿಂದ ಹೊರನಡೆದಿತ್ತು.
ಬಹುಮತವಿಲ್ಲದ ಸರ್ಕಾರವನ್ನು ಮುನ್ನಡೆಸುವುದು ನೆತನ್ಯಾಹುಗೆ ಸವಾಲುಗಳು ಎದುರಾಗುವ ಸಾಧ್ಯತೆಯಿದೆ. ಆದರೆ ಶಾಸ್ ಪಕ್ಷದವರು ಒಕ್ಕೂಟದಿಂದ ಹೊರಬಂದರೂ ಕೂಡ, ನೆತನ್ಯಾಹು ಸರಕಾರಕ್ಕೆ ತಕ್ಷಣಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಸರಕಾರದ ನೀತಿಗಳಳಿಗೆ ಬೆಂಬಲ ನೀಡುವುದಾಗಿ "ಶಾಸ್" ಪಕ್ಷದ ಮುಖಂಡರು ತಿಳಿಸಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ಗಾಝಾದಲ್ಲಿ ನಡೆಯುತ್ತಿರುವ ಯುದ್ಧಕ್ಕೆ ವಿರಾಮ ಹಾಕಲು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮದ ಮಾತುಕತೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿಯೇ ಇಸ್ರೇಲ್ ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.