ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಹೆಸರು ಸೂಚಿಸಿದ ನೆತನ್ಯಾಹು
PC: x.com/SuppressedNws
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಒಂದರ ಮೇಲೊಂದು ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗಾಗಿ ಒತ್ತಡ ಹೇರಿದ್ದನ್ನು ಪರಿಗಣಿಸಿ ಅವರ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಹಿರಂಗಪಡಿಸಿದ್ದಾರೆ.
"ಮಾನ್ಯ ಅಧ್ಯಕ್ಷರೇ ನೊಬೆಲ್ ಪ್ರಶಸ್ತಿ ಸಮಿತಿಗೆ ನಾನು ಪತ್ರ ಬರೆದಿರುವುದನ್ನು ನಿಮಗೆ ಪ್ರಸ್ತುತಪಡಿಸುತ್ತಿದ್ದೇನೆ. ನಿಮ್ಮನ್ನು ಶಾಂತಿ ಪ್ರಶಸ್ತಿಗಾಗಿ ನಾಮನಿರ್ದೇಶನ ಮಾಡುತ್ತಿದ್ದೇವೆ; ಇದಕ್ಕೆ ನೀವು ಅರ್ಹರಿದ್ದು, ನೀವು ಅದನ್ನು ಪಡೆಯಬೇಕು" ಎಂದು ನೆತನ್ಯಾಹು ಶ್ವೇತಭವನದಲ್ಲಿ ಟ್ರಂಪ್ ಜತೆ ಮಾತುಕತೆ ನಡೆಸಿದ ಬಳಿಕ ಪ್ರಕಟಿಸಿದರು.
ಹಲವು ವರ್ಷಗಳಿಂದ ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡುವಂತೆ ಅವರ ಬೆಂಬಲಿಗರು ಮತ್ತು ಸಂಸದರು ಮನವಿ ಮಾಡುತ್ತಾ ಬಂದಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತಮಗೆ ನೀಡದೇ ಇರುವ ಬಗ್ಗೆ ಬಹಿರಂಗವಾಗಿ ಹತಾಶೆ ವ್ಯಕ್ತಪಡಿಸಿದ್ದರು.
ಭಾರತ ಮತ್ತು ಪಾಕಿಸ್ತಾನ ಹಾಗೂ ಸೈಬೀರಿಯಾ ಮತ್ತು ಕೊಸೊವೊ ನಡುವಿನ ಸಂಘರ್ಷದ ಸಂದರ್ಭದಲ್ಲಿ ಮಧ್ಯಸ್ಥಗಾರರ ಪಾತ್ರ ವಹಿಸಿದ್ದನ್ನು ಕಡೆಗಣಿಸಿದ ನಾರ್ವೆಯ ನೊಬೆಲ್ ಸಮಿತಿಯನ್ನು ಟ್ರಂಪ್ ಟೀಕಿಸಿದ್ದರು.
ಈಜಿಪ್ಟ್ ಮತ್ತು ಇಥಿಯೋಪಿಯಾ ನಡುವೆ ಶಾಂತಿ ಸಂಧಾನ ಏರ್ಪಡಿಸಿದ್ದಾಗಿಯೂ ಹೇಳಿಕೊಂಡಿರುವ ಟ್ರಂಪ್, ಇಸ್ರೇಲ್ ಹಾಗೂ ಹಲವು ಅರಬ್ ದೇಶಗಳ ನಡುವಿನ ಸಂಬಂಧವನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಅಬ್ರಹಾಂ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿದ್ದಾಗಿಯೂ ಟ್ರಂಪ್ ಹೇಳಿಕೊಂಡಿದ್ದಾರೆ.