×
Ad

ಇರಾನ್ ಜೊತೆಗಿನ ಸಂಘರ್ಷದಿಂದ ಮಗನ ಮದುವೆ ಮತ್ತೆ ಮುಂದೂಡಬೇಕಾಯಿತು ಎಂದ ಪ್ರಧಾನಿ ನೆತನ್ಯಾಹು ವಿರುದ್ಧ ಇಸ್ರೇಲ್‌ ನಲ್ಲಿ ಭುಗಿಲೆದ್ದ ಆಕ್ರೋಶ

Update: 2025-06-20 13:04 IST

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (File Photo: PTI)

ಟೆಲ್ ಅವಿವ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದ ನನ್ನ ಮಗನ ಮದುವೆಯನ್ನು ಎರಡನೇ ಬಾರಿಗೆ ಮುಂದೂಡಬೇಕಾಯಿತು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ನೀಡಿರುವ ಹೇಳಿಕೆಯೊಂದು ಇಸ್ರೇಲ್‌ನಲ್ಲಿ ವ್ಯಾಪಕ ಟೀಕೆ ಮತ್ತು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಜನರು ತಮ್ಮ ದೇಶಕ್ಕಾಗಿ ಹೋರಾಡುತ್ತಿರುವಾಗ ನೆತನ್ಯಾಹು ತಮ್ಮ ಮಗನ ಮದುವೆಯನ್ನು ಮುಂದೂಡಿರುವುದನ್ನು ದೊಡ್ಡ ವಿಷಯವನ್ನಾಗಿ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಜನರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇಸ್ರೇಲ್ - ಇರಾನ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಸ್ರೇಲ್ ದಾಳಿಗೆ ಪ್ರತಿಯಾಗಿ ಇರಾನ್ ಇಸ್ರೇಲ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ಸೊರೊಕಾ ಆಸ್ಪತ್ರೆ ಕಟ್ಟಡಕ್ಕೆ ಭಾರಿ ಹಾನಿಯಾಗಿದೆ. ಇದನ್ನು ಪರಿಶೀಲಿಸಲು ಬಂದಿದ್ದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಲ್ಲಿ ನೆರೆದಿದ್ದ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ಇರಾನ್ ನಡೆಸಿದ ದಾಳಿಯಿಂದ ಹಲವು ಮಂದಿ ಜೀವ ಕಳೆದುಕೊಂಡಿದ್ದಾರೆ ಇದಕ್ಕೆ ನಾನು ಜನರಲ್ಲಿ ಕ್ಷಮೆ ಕೇಳುತ್ತೇನೆ. ಜೊತೆಗೆ ಈ ಸಂಘರ್ಷದಿಂದ ನಾನು ನನ್ನ ಮಗನ ಮದುವೆಯನ್ನು ಎರಡನೇ ಬಾರಿಗೆ ಮುಂದೂಡಿದ್ದೇನೆ. ಇದು ದೇಶಕ್ಕಾಗಿ ನಾನು ಮಾಡಿದ ತ್ಯಾಗ ಎಂದು ನೆತನ್ಯಾಹು ಹೇಳಿಕೊಂಡಿದ್ದಾರೆ.

ಇಸ್ರೇಲ್ ಇರಾನ್ ನಡುವಿನ ಸಂಘರ್ಷದಲ್ಲಿ ನಾನು ವೈಯಕ್ತಿಕವಾಗಿ ನಷ್ಟವನ್ನು ಅನುಭವಿಸಿದ್ದೇನೆ. ಜೊತೆಗೆ ನನ್ನ ಪತ್ನಿಯೂ ಮಾನಸಿಕ ಯಾತನೆಯನ್ನೂ ಅನುಭವಿಸಿದ್ದಾಳೆ ಅವರು ಪ್ರತಿಕ್ರಿಯಿಸಿದ್ದಾರೆ.

ಇಸ್ರೇಲ್ ಪ್ರಧಾನಿ ನೆತನ್ಯಾಹು ತನ್ನ ಮಗನ ಮದುವೆ ಮುಂದೂಡಿದ ವಿಚಾರವನ್ನು ಪತ್ರಕರ್ತರ ಮುಂದೆ ಪ್ರಸ್ತಾಪಿಸುತ್ತಿದ್ದಂತೆ ಇಸ್ರೇಲ್ ನಾಗರಿಕರು ಆಕ್ರೋಶ ಹೊರ ಹಾಕಿದ್ದಾರೆ. ದೇಶದಲ್ಲಿ ಯುದ್ಧ ನಡೆಯುತ್ತಿದ್ದರೆ ಪ್ರಧಾನಿಗೆ ಮಗನ ಮದುವೆ ಮುಂದೂಡಿದ ಚಿಂತೆ. ದೇಶಕ್ಕಾಗಿ ಜನ ಸಾಯುತ್ತಿದ್ದಾರೆ ಆದರೆ ಪ್ರಧಾನಿಗೆ ಮಾತ್ರ ತನ್ನ ಕುಟುಂಬ ಸದಸ್ಯರ ಚಿಂತೆ ಮಾತ್ರ ದೊಡ್ಡದಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ನೆತನ್ಯಾಹು ಅವರ ಮಗನ ಮದುವೆಯನ್ನು ಎರಡು ಬಾರಿ ಮುಂದೂಡಿದ್ದಾರೆ. ಈ ಹಿಂದೆ ತಮ್ಮ ಮಗನ ಮದುವೆಯನ್ನು ಕಳೆದ ನವೆಂಬರ್ ನಲ್ಲಿ ಮಾಡಲು ಉದ್ದೇಶಿಸಿದ್ದರು. ಆದರೆ ಕಾರಣಾಂತರಗಳಿಂದ ಅದನ್ನು ಮುಂದೂಡಲಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News